×
Ad

ದ್ವಿತೀಯ ಟೆಸ್ಟ್: ಆಸ್ಟ್ರೇಲಿಯ ಗೆಲುವಿಗೆ ಸುಲಭ ಸವಾಲು

Update: 2016-02-23 23:14 IST

ಬರ್ಡ್, ಪ್ಯಾಟಿನ್ಸನ್ ಅಮೋಘ ಬೌಲಿಂಗ್

ಕ್ರೈಸ್ಟ್‌ಚರ್ಚ್, ಫೆ.23: ಜಾಕ್ಸನ್ ಬರ್ಡ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಅಮೋಘ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದ ಗೆಲುವಿಗೆ ಸುಲಭ ಸವಾಲು ಪಡೆದಿದೆ.

ನಾಲ್ಕನೆ ದಿನವಾದ ಮಂಗಳವಾರ ವಿಲಿಯಮ್ಸನ್(97ರನ್, 210 ಎಸೆತ, 8 ಬೌಂಡರಿ) ಹಾಗೂ ಮ್ಯಾಟ್ ಹೆನ್ರಿ(66 ರನ್, 93 ಎಸೆತ, 12 ಬೌಂಡರಿ) ಹೋರಾಟದ ಹೊರತಾಗಿಯೂ ಬಿಗಿ ಬೌಲಿಂಗ್ ಸಂಘಟಿಸಿದ ಬರ್ಡ್(5-59) ಹಾಗೂ ಪ್ಯಾಟಿನ್ಸನ್(4-77) ನ್ಯೂಝಿಲೆಂಡ್‌ನ್ನು 2ನೆ ಇನಿಂಗ್ಸ್‌ನಲ್ಲಿ 335 ರನ್‌ಗೆ ನಿಯಂತ್ರಿಸಿದರು.ಆಸ್ಟ್ರೇಲಿಯದ ಗೆಲುವಿಗೆ 201 ರನ್ ಗುರಿ ನಿಗದಿಪಡಿಸಿದರು.

ಆಸ್ಟ್ರೇಲಿಯ ದಿನದಾಟದಂತ್ಯಕ್ಕೆ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ. ಜೋ ಬರ್ನ್ಸ್(27) ಹಾಗೂ ಉಸ್ಮಾನ್ ಖ್ವಾಜಾ(ಔಟಾಗದೆ 19) ಕ್ರೀಸ್ ಕಾಯ್ದುಕೊಂಡಿದ್ದಾರೆ.

5ನೆ ಹಾಗೂ ಅಂತಿಮ ದಿನವಾದ ಬುಧವಾರ ಆಸ್ಟ್ರೇಲಿಯಕ್ಕೆ ಇನ್ನೂ 131 ರನ್ ಗಳಿಸಬೇಕಾಗಿದೆ. ಡೇವಿಡ್ ವಾರ್ನರ್(22) ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. 19 ಹಾಗೂ 23 ರನ್‌ಗೆ ಜೀವದಾನ ಪಡೆದಿದ್ದ ಬರ್ನ್ಸ್ ಔಟಾಗದೆ ಉಳಿದಿದ್ದಾರೆ. ಅವರಿಗೆ ಖ್ವಾಜಾ ಸಾಥ್ ನೀಡುತ್ತಿದ್ದಾರೆ.

ನ್ಯೂಝಿಲೆಂಡ್ 335: ಎರಡನೆ ಇನಿಂಗ್ಸ್‌ನಲ್ಲಿ ಎರಡು ಶತಕದ ಜೊತೆಯಾಟವನ್ನು ನಡೆಸಿದ ನ್ಯೂಝಿಲೆಂಡ್ ಪಂದ್ಯವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದು, ಎರಡನೆ ಇನಿಂಗ್ಸ್‌ನಲ್ಲಿ 335 ರನ್‌ಗೆ ಆಲೌಟಾಗಿತ್ತು.

ನ್ಯೂಝಿಲೆಂಡ್ 4 ವಿಕೆಟ್‌ಗೆ 121 ರನ್‌ನಿಂದ ಎರಡನೆ ಇನಿಂಗ್ಸ್ ಆರಂಭಿಸಿತ್ತು. ವಿಲಿಯಮ್ಸನ್ ಹಾಗೂ ಆ್ಯಂಡರ್ಸನ್ ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿ 5ನೆ ವಿಕೆಟ್‌ಗೆ 102 ರನ್ ಜೊತೆಯಾಟ ನಡೆಸಿತು. ಆ್ಯಂಡರ್ಸನ್ ವಿಕೆಟ್ ಉರುಳಿಸಿದ ಬರ್ಡ್ಸ್ ಈ ಜೊತೆಯಾಟವನ್ನು ಮುರಿದರು.

ಬರ್ಡ್ 6 ಎಸೆತಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸಿ ಕಿವೀಸ್‌ಗೆ ಆಘಾತ ನೀಡಿದರು. ಆಗ 8ನೆ ವಿಕೆಟ್‌ಗೆ 118 ರನ್ ಸೇರಿಸಿದ ಬಿಜೆ ವಾಟ್ಲಿಂಗ್(46 ರನ್, 77 ಎಸೆತ, 6 ಬೌಂಡರಿ) ಹಾಗೂ ಜೀವನಶ್ರೇಷ್ಠ ಇನಿಂಗ್ಸ್ ಆಡಿದ ಹೆನ್ರಿ(66 ರನ್) ತಂಡವನ್ನು ಆಧರಿಸಿದರು.

ಆದರೆ, ಆತಿಥೇಯರು ಕೇವಲ 7ರನ್ ಗಳಿಸುವಷ್ಟರಲ್ಲಿ ಅಂತಿಮ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 335 ರನ್‌ಗೆ ಆಲೌಟಾದರು.

ಆಸ್ಟ್ರೇಲಿಯದ ಪರ ಬರ್ಡ್(5-59) ಹಾಗೂ ಪ್ಯಾಟಿನ್ಸನ್(4-77) 9 ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್

ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 370

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 505

ನ್ಯೂಝಿಲೆಂಡ್: ದ್ವಿತೀಯ ಇನಿಂಗ್ಸ್: 335

(ವಿಲಿಯಮ್ಸನ್ 97, ಹೆನ್ರಿ 66, ವಾಟ್ಲಿಂಗ್ 46, ಆ್ಯಂಡರ್ಸನ್ 40, ಲಾಥಮ್ 39, ಬರ್ಡ್ 5-59, ಪ್ಯಾಟಿನ್ಸನ್ 4-77)

ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 20 ಓವರ್‌ಗಳಲ್ಲಿ 70/1

(ಜೋ ಬರ್ನ್ಸ್ 27, ವಾರ್ನರ್ 22, ಖ್ವಾಜಾ ಔಟಾಗದೆ 19, ವಾಗ್ನೆರ್ 1-13)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News