ಇಂದು ರಣಜಿ ಫೈನಲ್: ಮುಂಬೈ-ಸೌರಾಷ್ಟ್ರ ಸೆಣಸು

Update: 2016-02-23 17:51 GMT

 ಪುಣೆ, ಫೆ.23: ಐತಿಹಾಸಿಕ 41ನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಮುಂಬೈ ತಂಡ ಬುಧವಾರ ಇಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆೆ

ಉಭಯ ತಂಡಗಳು ನಾಲ್ಕು ವರ್ಷಗಳ ಬಳಿಕ ಎರಡನೆ ಬಾರಿ ಮುಖಾಮುಖಿಯಾಗುತ್ತಿವೆ. 2013ರಲ್ಲಿ ಕೊನೆಯ ಬಾರಿ ಸೆಣಸಾಡಿದ್ದವು. ಮುಂಬೈ ರಣಜಿ ಟ್ರೋಫಿಯಲ್ಲಿ 45 ಬಾರಿ ಫೈನಲ್‌ಗೆ ತಲುಪಿದ್ದು, 40 ಬಾರಿ ಪ್ರಶಸ್ತಿ ಜಯಿಸಿದೆ. ಇದೀಗ 41ನೆ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಮುಂಬೈ 1990-91ರ ನಂತರ 10 ಬಾರಿ ಫೈನಲ್ ತಲುಪಿದ್ದು, ಒಮ್ಮೆಯೂ ಸೋತಿಲ್ಲ.

 ಮೂರು ವರ್ಷಗಳ ಹಿಂದೆ ನಡೆದಿದ್ದ ರಣಜಿ ಫೈನಲ್‌ನಲ್ಲಿ ಸಚಿನ್ ತೆಂಡುಲ್ಕರ್, ವಾಸಿಂ ಜಾಫರ್ ಹಾಗೂ ಅಜಿತ್ ಅಗರ್ಕರ್ ಅವರಂತಹ ಸ್ಟಾರ್ ಆಟಗಾರರಿದ್ದ ಮುಂಬೈ ತಂಡ ಸೌರಾಷ್ಟ್ರವನ್ನು ಮೂರೇ ದಿನದಲ್ಲಿ ಇನಿಂಗ್ಸ್ ಹಾಗೂ 125 ರನ್‌ಗಳಿಂದ ಮಣಿಸಿ 40ನೆ ಬಾರಿ ರಣಜಿ ಟ್ರೋಫಿಯನ್ನು ಜಯಿಸಿತ್ತು.

ಈ ವರ್ಷವೂ ರಣಜಿ ಟ್ರೋಫಿ ಜಯಿಸುವ ಫೇವರಿಟ್ ತಂಡವಾಗಿರುವ ಮುಂಬೈನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಖಿಲ್ ಹೇರ್ವಾಡ್ಕರ್, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್ ಹಾಗೂ ಆದಿತ್ಯ ತಾರೆ ಅವರಿದ್ದಾರೆ. ಐಯ್ಯರ್ ಹಾಗೂ ಹೇರ್ವಾಡ್ಕರ್ ಕ್ರಮವಾಗಿ 1,204 ಹಾಗೂ 879 ರನ್ ಗಳಿಸಿದ್ದಾರೆ.

ಮಧ್ಯಪ್ರದೇಶ ವಿರುದ್ಧದ ಸೆಮಿ ಫೈನಲ್‌ನಲ್ಲಿ ಶತಕ ಬಾರಿಸಿದ್ದ ಮುಂಬೈ ನಾಯಕ ಆದಿತ್ಯ ತಾರೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಮತ್ತೊಂದೆಡೆ ಸೌರಾಷ್ಟ್ರ ತಂಡ ಚೇತೇಶ್ವರ ಪೂಜಾರರನ್ನು ಹೆಚ್ಚು ಅವಲಂಭಿಸಿದೆ. ಪೂಜಾರ ಅಸ್ಸಾಂ ವಿರುದ್ಧದ ಸೆಮಿ ಫೈನಲ್‌ನಲ್ಲಿ ಶತಕ ಸಿಡಿಸಿದ್ದಾರೆ.

ಶೆಲ್ಡನ್ ಜಾಕ್ಸನ್(525), ಸಾಗರ್ ಜೋಗಿಯಾನಿ(474) ಹಾಗೂ ನಾಯಕ ಜೈದೇವ್ ಶಾ ಸೌರಾಷ್ಟ್ರದ ಬ್ಯಾಟಿಂಗ್ ಶಕ್ತಿಗಳು. ಜೈದೇವ್ ಉನದ್ಕಟ್(36 ವಿಕೆಟ್), ಸ್ಪಿನ್ನರ್ ಕಮಲೇಶ್(33 ವಿಕೆಟ್)ಸೌರಾಷ್ಟ್ರ ತಂಡ ಫೈನಲ್ ತಲುಪಲು ಪ್ರಮುಖ ಪಾತ್ರವಹಿಸಿದ್ದಾರೆ.

ಎಡಗೈ ವೇಗಿ ಉನದ್ಕಟ್ ವಿದರ್ಭ ಹಾಗೂ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಒಟ್ಟು 20 ವಿಕೆಟ್‌ಗಳನ್ನು ಉರುಳಿಸಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು.

ಉಭಯ ತಂಡಗಳು 53 ಪಂದ್ಯಗಳನ್ನು ಆಡಿದ್ದು, ಮುಂಬೈ 27ರಲ್ಲಿ ಜಯ ಸಾಧಿಸಿದೆ. 26 ಪಂದ್ಯ ಡ್ರಾಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News