ಎಲೈಟ್ ಕ್ಲಬ್‌ಗೆ ವಿಲಿಯಮ್ಸನ್
ಕ್ರೈಸ್ಟ್‌ಚರ್ಚ್, ಫೆ.23: ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಹಲವು ದಾಖಲೆಗಳನ್ನು ಮುರಿದ ನ್ಯೂಝಿಲೆಂಡ್‌ನ ದಾಂಡಿಗ ಕೇನ್ ವಿಲಿಯಮ್ಸನ್ ಎಲೈಟ್ ಕ್ಲಬ್‌ಗೆ ಸೇರ್ಪಡೆಯಾದರು.
4ನೆ ದಿನವಾದ ಮಂಗಳವಾರ ಕೇವಲ 3 ರನ್‌ನಿಂದ 14ನೆ ಶತಕದಿಂದ ವಂಚಿತರಾದ ವಿಲಿಯಮ್ಸನ್(97 ರನ್) 89ನೆ ಇನಿಂಗ್ಸ್‌ನಲ್ಲಿ 4000 ರನ್ ಕ್ರಮಿಸಲು ಯಶಸ್ವಿಯಾದರು.
ವಿಲಿಯಮ್ಸನ್ 24 ವರ್ಷ ಹಳೆಯ ನ್ಯೂಝಿಲೆಂಡ್ ದಾಖಲೆಯನ್ನು ಮುರಿದರು. ಅತ್ಯಂತ ವೇಗವಾಗಿ 4 ಸಾವಿರ ರನ್ ಪೂರೈಸಿದ ವಿಲಿಯಮ್ಸನ್, ಮಾರ್ಟಿನ್ ಕ್ರೋವ್(93 ಇನಿಂಗ್ಸ್, 4000 ರನ್) ದಾಖಲೆಯನ್ನು ಮುರಿದ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕಿವೀಸ್‌ನ ಇನ್ನೋರ್ವ ದಾಂಡಿಗ ರಾಸ್ ಟೇಲರ್ 94ನೆ ಇನಿಂಗ್ಸ್‌ನಲ್ಲಿ 4 ಸಾವಿರ ರನ್ ಪೂರೈಸಿದ್ದರು.
ಸರ್ ಡಾನ್ ಬ್ರಾಡ್ಮನ್ ಅತ್ಯಂತ ವೇಗವಾಗಿ (48 ಇನಿಂಗ್ಸ್)4 ಸಾವಿರ ರನ್ ಪೂರೈಸಿದ್ದ ದಾಖಲೆ ಮಾಡಿದ್ದರು. 89ನೆ ಇನಿಂಗ್ಸ್‌ನಲ್ಲಿ 4 ಸಾವಿರ ರನ್ ಪೂರೈಸಿರುವ ವಿಲಿಯಮ್ಸನ್ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ (96 ಇನಿಂಗ್ಸ್), ಶ್ರೀಲಂಕಾದ ಕುಮಾರ ಸಂಗಕ್ಕರ (92 ಇನಿಂಗ್ಸ್) ಹಾಗೂ ಮಹೇಲ ಜಯವರ್ಧನೆ (91 ಇನಿಂಗ್ಸ್) ದಾಖಲೆಯನ್ನು ಮುರಿದಿದ್ದಾರೆ.
2015ರಲ್ಲಿ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ವಿಲಿಯಮ್ಸನ್ 90.15ರ ಸರಾಸರಿಯಲ್ಲಿ ಐದು ಶತಕಗಳ ಸಹಿತ ಒಟ್ಟು 1,172 ರನ್ ಗಳಿಸಿದ್ದರು. ಇದೀಗ ಮತ್ತೊಂದು ಮೈಲುಗಲ್ಲನ್ನು ತಲುಪಿರುವ ಅವರು ನ್ಯೂಝಿಲೆಂಡ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.