ಸೌದಿ ವಿಮಾನ ಅಪಹರಿಸಲು ಇರಾನ್ ಯತ್ನ?
ವಿಫಲಗೊಳಿಸಿದ ಫಿಲಿಪ್ಪೀನ್ಸ್: ಪತ್ರಿಕೆ
ರಿಯಾದ್, ಫೆ. 24: ಫಿಲಿಪ್ಪೀನ್ಸ್ ರಾಜಧಾನಿ ಮನಿಲದ ನಿನಾಯ್ ಅಕ್ವಿನೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯನ್ ಏರ್‌ಲೈನ್ಸ್ ವಿಮಾನವೊಂದನ್ನು ಅಪ ಹರಿಸುವ ಇರಾನ್‌ನ ಪ್ರಯತ್ನವನ್ನು ಫಿಲಿಪ್ಪೀನ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ.
ವಿಮಾನ ಅಪಹರಣ ಪ್ರಯತ್ನವನ್ನು ವಿಫಲಗೊಳಿಸಿದ ಅಧಿಕಾರಿಗಳು, ಪಿತೂರಿಯನ್ನು ಸಾಬೀತುಪಡಿಸುವ ರಹಸ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮನಿಲದ ಪತ್ರಿಕೆ ‘ಮನಿಲ ಬುಲೆಟಿನ್’ ವರದಿ ಮಾಡಿದೆ.
ಪಿತೂರಿಗಾರರ ತಂಡದ 10 ಸದಸ್ಯರು ಇತ್ತೀಚೆಗೆ ಇರಾನ್‌ನಿಂದ ಪ್ರತ್ಯೇಕ ವಿಮಾನಗಳಲ್ಲಿ ಪ್ರಯಾಣಿಸಿ ಟರ್ಕಿಯ ಮೂಲಕ ಆಗ್ನೇಯ ಏಶ್ಯದ ವಿವಿಧ ರಾಷ್ಟ್ರಗಳನ್ನು ತಲುಪಿದರು ಎಂದು ಪತ್ರಿಕೆ ಹೇಳಿದೆ. ಮಲೇಶ್ಯ, ಇಂಡೋನೇಶ್ಯ ಅಥವಾ ಫಿಲಿಪ್ಪೀನ್ಸ್ ನಲ್ಲಿ ತಮ್ಮ ಪಿತೂರಿಯನ್ನು ಕಾರ್ಯರೂಪಕ್ಕಿಳಿಸಲು ಅವರು ಯೋಜನೆ ರೂಪಿಸಿದ್ದರು ಎಂದಿದೆ.
ಸೌದಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಭದ್ರತಾ ತಪಾಸಣೆಯನ್ನು ಬಿಗಿಗೊಳಿಸುವುದಕ್ಕಾಗಿ ತಪಾಸಣಾ ಸಾಧನಗಳನ್ನು ಅಳವಡಿಸುವಂತೆ ಮನಿಲದಲ್ಲಿರುವ ಸೌದಿ ರಾಯಭಾರ ಕಚೇರಿಯು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಕೋರಿತ್ತು.
ಈ ಮನವಿಯನ್ನು ಫಿಲಿಪ್ಪೀನ್ಸ್‌ನ ಸಂಬಂಧಪಟ್ಟ ಪ್ರಾಧಿಕಾರ ಗಳಿಗೆ ಸಲ್ಲಿಸಲಾಗಿತ್ತು.
ತನ್ನ ಕಂಪೆನಿಯು ವಿಮಾನ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ವಕ್ತಾರ ಅಬ್ದುರ್ರಹ್ಮಾನ್ ಅಲ್-ಫಹದ್ ತಿಳಿಸಿದರು. ವಿಮಾನ ಸುರಕ್ಷತೆ ಅಂತಾರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದರು.