ಬ್ಲಾಟರ್, ಪ್ಲಾಟಿನಿ ವಿರುದ್ಧದ ನಿಷೇಧ ಕಡಿತಗೊಳಿಸಿದ ಫಿಫಾ
ಝೂರಿಕ್, ಫೆ.25: ಫಿಫಾ ಮೇಲ್ಮನವಿ ಸಮಿತಿಯು ಸೆಪ್ ಬ್ಲಾಟರ್ ಹಾಗೂ ಮೈಕಲ್ ಪ್ಲಾಟಿನಿ ವಿರುದ್ಧದ ಹೇರಲಾಗಿದ್ದ ನಿಷೇಧದ ಅವಧಿಯನ್ನು ಆರು ವರ್ಷಕ್ಕೆ ಕಡಿತಗೊಳಿಸಿದೆ. ಈ ಇಬ್ಬರು ಎಥಿಕ್ಸ್ ಸಮಿತಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಅದು ಹೇಳಿದೆ.
ಫಿಫಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಫಿಫಾ ಮೇಲ್ಮನವಿ ಸಮಿತಿ ಈ ತೀರ್ಪಿ ಪ್ರಕಟಿಸಿದೆ. ಫಿಫಾ ಚುನಾವಣೆ ಶುಕ್ರವಾರ ನಡೆಯಲಿದೆ.
ಫಿಫಾದ ಅಧ್ಯಕ್ಷ ಬ್ಲಾಟರ್ ಹಾಗೂ ಯುಇಎಫ್‌ಎ ಅಧ್ಯಕ್ಷ ಪ್ಲಾಟಿನಿ ಕ್ರಮವಾಗಿ 17 ಹಾಗೂ 8 ವರ್ಷ ನಿಷೇಧ ಎದುರಿಸುತ್ತಿದ್ದರು.
ಇದೀಗ ಈ ಇಬ್ಬರ ನಿಷೇಧದ ಅವಧಿಯನ್ನು ಮೇಲ್ಮನವಿ ಸಮಿತಿಯು ಆರು ವರ್ಷಕ್ಕೆ ಇಳಿಸಿದೆ. ಫ್ರೆಂಚ್ ಫುಟ್ಬಾಲ್ ದಂತಕತೆ ಪ್ಲಾಟಿನಿ ಫಿಫಾ ಅಧ್ಯಕ್ಷ ಸ್ಥಾನಕ್ಕೆ ಏರುವ ಫೇವರಿಟ್ ಅಭ್ಯರ್ಥಿಯಾಗಿದ್ದರು. ಆದರೆ, ನಿಷೇಧ ಎದುರಿಸುತ್ತಿರುವ ಪ್ಲಾಟಿನಿ ಕನಸು ಭಗ್ನವಾಗಿದೆ.
ಫಿಫಾ ಮೇಲ್ಮನವಿ ಸಮಿತಿಯ ಈ ತೀರ್ಪಿನಿಂದ ಅಸಮಾಧಾನಗೊಂಡಿರುವ ಬ್ಲಾಟರ್ ಹಾಗೂ ಪ್ಲಾಟಿನಿ ನಿಷೇಧವನ್ನು ಹಿಂದಕ್ಕೆ ಪಡೆಯುವಂತೆ ಕ್ರೀಡಾ ಪಂಚಾಯತಿ ನ್ಯಾಯಾಲಯಕ್ಕೆ ಮೊರೆ ಹೋಗಲು ನಿರ್ಧರಿಸಿದ್ದಾರೆ