ಏಷ್ಯಾಕಪ್: ಭಾರತದ ಆಲ್‌ರೌಂಡ್ ಆಟಕ್ಕೆ ಪಾಕ್ ಶರಣು
ಧೋನಿ ಪಡೆಗೆ 5 ವಿಕೆಟ್ ಜಯ
ಮೀರ್ಪುರ, ಫೆ.27: ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದೆ.
ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೆ ಗೆಲುವು ಸಾಧಿಸಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 84 ರನ್ ಸುಲಭ ಸವಾಲು ಪಡೆದ ಭಾರತ ತಂಡ 15.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು.
ಪಾಕ್ ತಂಡಕ್ಕೆ ಐದು ವರ್ಷಗಳ ನಂತರ ವಾಪಸಾಗಿರುವ ವೇಗದ ಬೌಲರ್ ಮುಹಮ್ಮದ್ ಆಮಿರ್ ದಾಳಿಗೆ ಸಿಲುಕಿ 8 ರನ್‌ಗೆ 3 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು.
ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಶೂನ್ಯಕ್ಕೆ ಔಟಾದರು. ರೈನಾ 1 ರನ್ ಗಳಿಸಿದರು. ಆಗ ನಾಲ್ಕನೆ ವಿಕೆಟ್‌ಗೆ 68 ಉಪಯುಕ್ತ ಜೊತೆಯಾಟ ನಡೆಸಿದ ವಿರಾಟ್ ಕೊಹ್ಲಿ (49 ರನ್, 51 ಎಸೆತ, 7 ಬೌಂಡರಿ)ಹಾಗೂ ಯುವರಾಜ್ ಸಿಂಗ್(14 ರನ್, 32 ಎಸೆತ) ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದರು.
ಕೊಹ್ಲಿ 49ನೆ ರನ್‌ಗೆ ಔಟಾದರು. ತಾಳ್ಮೆಯ ಇನಿಂಗ್ಸ್ ಆಡಿದ ಯುವಿ ಹಾಗೂ ನಾಯಕ ಧೋನಿ(7) ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಾಕಿಸ್ತಾನ 83 ರನ್‌ಗೆ ಆಲೌಟ್: ಇದಕ್ಕೆ ಮೊದಲು ಭಾರತದ ಶಿಸ್ತುಬದ್ಧ ಬೌಲಿಂಗ್ ಹಾಗೂ ಫೀಲ್ಡಿಂಗ್‌ಗೆ ನಿರುತ್ತರವಾದ ಪಾಕಿಸ್ತಾನ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 17.3 ಓವರ್‌ಗಳಲ್ಲಿ ಕೇವಲ 83 ರನ್‌ಗೆ ಆಲೌಟಾಯಿತು.