ಮಹಿಷಾಸುರ ದೇಶ ವಿರೋಧಿಯೇ?

Update: 2016-02-27 18:40 GMT

ಜವಾಹರಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್‌ನನ್ನು ದೇಶದ್ರೋಹ ಹಾಗೂ ಅಪರಾಧ ಸಂಚು ಆರೋಪದಲ್ಲಿ ಬಂಧಿಸಿದ ಮೂರು ದಿನಗಳ ಬಳಿಕ ಅಂದರೆ ಫೆಬ್ರವರಿ 15ರಂದು ದಿಲ್ಲಿ ಪೊಲೀಸರು ಗೃಹಸಚಿವಾಲಯಕ್ಕೆ ಒಂದು ವರದಿ ಸಲ್ಲಿಸಿದರು. ಹಿಂದೂ ಪತ್ರಿಕೆಯ ಫೆಬ್ರವರಿ 18ರ ಸಂಚಿಕೆಯ ವರದಿ ಪ್ರಕಾರ, ಜೆಎನ್‌ಯು ವಿದ್ಯಾರ್ಥಿಗಳ ಗುಪ್ತ ಗುಂಪುಗಳು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ. ಏಕೆಂದರೆ ಅಫ್ಝಲ್ ಗುರುವಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದು, ಗೋಮಾಂಸಕ್ಕೆ ಆಗ್ರಹಿಸಿರುವುದು ಮತ್ತು ದುರ್ಗೆಯ ಬದಲು ಮಹಿಷಾಸುರನನ್ನು ಪೂಜಿಸಿರುವುದು ಇವರ ಇತರ ಕೃತ್ಯಗಳು.

ದೇಶದ ಬಹುತೇಕ ಎಲ್ಲ ಸುದ್ದಿಮಾಧ್ಯಮಗಳು, ಮಹಿಷಾಸುರ ಎಂಬ ವಾಕ್ಯದಿಂದ ತಬ್ಬಿಬ್ಬಾಗಿಸಿದೆ. ಮಿಂಟ್ ಇದನ್ನು ಪೊಲೀಸರ ನೈತಿಕ ದಿಗಿಲು ಎಂದು ಟೀಕಿಸಿದ್ದರೆ, ಬೆಂಗಳೂರು ಮಿರರ್, ನಿರುಪದ್ರವಿಗಳ ಮೇಲಿನ ವಿಲಕ್ಷಣ ದೃಷ್ಟಿ ಎಂದು ಬಣ್ಣಿಸಿದೆ. ಜೆಎನ್‌ಯುನಲ್ಲಿ ಡಿಬಾರ್ ಆದ ವಿದ್ಯಾರ್ಥಿಗಳು, ಜೆಎನ್‌ಯು ಹಾಗೂ ದೇಶದ ವಿವಿಧೆಡೆಗಳಲ್ಲಿ ಉದ್ಭವಿಸಿರುವ ಮಹಿಷಾಸುರ ವಿವಾದದಿಂದ ಪಾರಾಗಿದ್ದಾರೆ. ಹಿಂದೂ ಪುರಾಣಗಳಲ್ಲಿ ಮಹಿಷಾಸುರನನ್ನು ರಾಕ್ಷಸ ಎಂದು ಪರಿಗಣಿಸಲಾಗುತ್ತದೆ. ಆದರೆ ಸಾಂಸ್ಕೃತಿಕ ಇತಿಹಾಸಕಾರರ ನಿಲುವನ್ನು ಬೆಂಬಲಿಸಿ, ಈ ಪಕ್ಷಪಾತದ ನಿರ್ಧಾರವನ್ನು ಅಲ್ಲಗಳೆಯುವ ಹೋರಾಟಗಾರರ ಹೃದಯದಲ್ಲಿ ಮಹಿಷಾಸುರ ಸ್ಥಾನ ಪಡೆದಿದ್ದಾನೆ.

ಕಳೆದ ಅಕ್ಟೋಬರ್‌ನಲ್ಲಿ ಚಳಿಗಾಲದ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಮಹಿಷಾಸುರರನ್ನು ವಧಿಸಿದರು. ಪುರಾಣಕಥೆಯ ಪ್ರಕಾರ ಆತ ಅರ್ಧ ಮನುಷ್ಯ ಹಾಗೂ ಇನ್ನರ್ಧ ಕೋಣ. ಆತನನ್ನು ಯಾವ ಮನುಷ್ಯನೂ ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ ಬ್ರಹ್ಮ, ವಿಷ್ಣು, ಮಹೇಶ್ವರರ ಶಕ್ತಿ ಜತೆಯಾಗಿ ದುರ್ಗಾಮಾತೆಯನ್ನು ಸೃಷ್ಟಿಸುತ್ತಾರೆ. ಮಹಿಷಾಸುರ ಮರ್ಧನಕ್ಕಾಗಿಯೇ ಆಕೆ ಭೂಮಿಗೆ ಅವತಾರವೆತ್ತಿ ಬರುತ್ತಾಳೆ. ಈ ಪುರಾಣದ ಆಧಾರದಲ್ಲೇ ದುರ್ಗಾಪೂಜೆ, ನವರಾತ್ರಿ ಹಾಗೂ ದಸರಾ ಆಚರಿಸಲಾಗುತ್ತದೆ. ಬಹುತೇಕ ದುರ್ಗಾಮಾತೆಯ ವಿಗ್ರಹಗಳು ಮಹಿಷಾಸುರ ಮರ್ಧನ ಭಂಗಿಯದ್ದೇ ಇರುತ್ತದೆ. ಸಹಜವಾಗಿಯೇ ಆಕರ್ಷಕ ಬಣ್ಣದ, ಸಾಲಂಕೃತ ದುರ್ಗೆ, ಭರ್ಚಿಯಿಂದ ಕಡುಬಣ್ಣದ ಅರೆನಗ್ನ ಮಹಿಷಾಸುರನನ್ನು ತಿವಿಯುತ್ತಾಳೆ.

ಆದರೆ ಕಳೆದ ವರ್ಷದ ನವೆಂಬರ್ 1ರಂದು ಉತ್ತರ ಪಾಟ್ನಾದಿಂದ 40 ಕಿಲೋಮೀಟರ್ ದೂರದ ಭಗವಾನ್‌ಪುರದ ಸುಮಾರು ಒಂದು ಸಾವಿರ ಗ್ರಾಮಸ್ಥರು ಪರ್ಯಾಯವಾಗಿ ಒಂದು ಡೇರೆಯಲ್ಲಿ ಆಚರಣೆಗೆ ತೊಡಗಿದರು. ನಸುಗೆಂಪು ಬಣ್ಣದ ಪ್ಲಾಸ್ಟಿಕ್ ಕುರ್ಚಿಗಳಲ್ಲಿ ಕುಳಿತ ಇವರನ್ನು ಉದ್ದೇಶಿಸಿ ವೇದಿಕೆಯಿಂದ ಹಲವರು ಮಾತನಾಡಿದರು. ವೇದಿಕೆಯ ಮೇಲೆ ದೇವನಾಗರಿ ಲಿಪಿಯಲ್ಲಿ, ಅಮರ್ ಶಹೀದ್ ಮಹಿಷಾಸುರ (ಚಿರಂಜೀವಿ ಹುತಾತ್ಮ ಮಹಿಷಾಸುರ) ಎಂದು ರಾರಾಜಿಸುತ್ತಿತ್ತು. ಮಹಿಷಾಸುರ ಪುರಾಣದ ಬಗ್ಗೆ ಮತ್ತು ಜಾತಿ ಅನ್ಯಾಯದ ಬಗ್ಗೆ ಬೆಳಗ್ಗೆ 11ರ ಸುಮಾರಿಗೆ ಭಾಷಣ-ಚರ್ಚೆಗಳು ಆರಂಭವಾದವು. ಈ ಸಮಾರಂಭದಲ್ಲಿ ಹಾಜರಿದ್ದ ಮತ್ತು ಪಾಟ್ನಾದಲ್ಲಿ ಇಂತಹ ಎರಡು ಸಮಾರಂಭ ಆಯೋಜಿಸಲು ನೆರವಾಗಿದ್ದ ಉದಯನ್ ರಾತ್ ನನಗೆ ಹೇಳಿದ್ದಂತೆ, ಇಲ್ಲಿ ಭಾಷಣಕಾರರು ಜನರಿಗೆ ಸರಿಯಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಧಾರ್ಮಿಕ ಪೊಳ್ಳುನಂಬಿಕೆಗಳನ್ನು ಮತ್ತು ಆಚರಣೆಗಳನ್ನು ಬಿಟ್ಟು, ಮೂಢನಂಬಿಕೆಗಳನ್ನು ಹಾಗೂ ಪುರೋಹಿತಶಾಹಿ ನಂಬಿಕೆಗಳನ್ನು ಬಿಟ್ಟುಬಿಡಬೇಕು ಹಾಗೂ ಸಾವಿನ ಸಂದರ್ಭದಲ್ಲಿ ದುಬಾರಿ ವೆಚ್ಚ ಮಾಡುವುದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಸಂಜೆ ಭಾಷಣ ಮುಗಿದ ಬಳಿಕ ರಾತ್ರಿ 1 ಗಂಟೆವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬಹುತೇಕ ಹಾಡುಗಳಲ್ಲಿ ಜಾತಿಪದ್ಧತಿ ವಿರೋಧಿಸುವ ಅಂಬೇಡ್ಕರ್ ಹಾಗೂ ಜ್ಯೋತಿಬಾ ಫುಲೆ ಅವರನ್ನು ಹೊಗಳಲಾಯಿತು.

ಹಲವು ಮಂದಿ ದಲಿತ ಹಾಗೂ ಆದಿವಾಸಿ ಸಮುದಾಯದವರು ಮಹಿಷಾಸುರನನ್ನು ಪುರಾಣದ ರಾಕ್ಷಸನಲ್ಲ. ನಿಜಜೀವನದ ಐತಿಹಾಸಿಕ ಹೀರೊ ಎಂದು ಗೌರವಿಸಿದರು. ಇತ್ತೀಚಿನ ದಿನಗಳಲ್ಲಿ ಕೆಲವರು ಈ ಕಥೆಗೂ ಆರ್ಯರ ದಾಳಿ ಸಿದ್ಧಾಂತಕ್ಕೂ ಸಂಬಂಧ ಕಲ್ಪಿಸಿದ್ದಾರೆ. ಹಲವು ಸಹಸ್ರಮಾನಗಳ ಹಿಂದೆ, ಇಂಡೋ-ಆರ್ಯನ್ ಜನರ ಒಂದು ಗುಂಪು ಈ ಉಪಖಂಡವನ್ನು ವಶಪಡಿಸಿಕೊಂಡು ದೇಶೀಯ ವಾಸತಾಣಗಳ ಮೇಲೆ ದಾಳಿ ಮಾಡಿತು. ಶೈಕ್ಷಣಿಕ ವಲಯದಲ್ಲಿ ಈ ಸಿದ್ಧಾಂತಕ್ಕೆ ಪ್ರಬಲ ವಿರೋಧವಿದ್ದರೂ, ಹಲವರ ನಂಬಿಕೆಯಂತೆ ಭಾರತದ ಹಾಲಿ ದಲಿತರು ಹಾಗೂ ಆದಿವಾಸಿಗಳು ಈ ದೇಶೀಯ ಜನರೇ ಆಗಿದ್ದಾರೆ. ಹೀಗೆ ನಡೆದ ಆರ್ಯರ ದಾಳಿಯಲ್ಲಿ ಈ ಭಾಗದ ರಾಜನಾಗಿದ್ದ ಮಹಿಷಾಸುರ ಕೊಲ್ಲಲ್ಪಟ್ಟ ಎಂದು ಹಲವು ದಲಿತರು ಹಾಗೂ ಆದಿವಾಸಿಗಳು ಪ್ರತಿಪಾದಿಸುತ್ತಾರೆ. ಜತೆಗೆ ಬ್ರಾಹಣ್ಯದ ವಿರುದ್ಧ ಜನ ಒಂದಾಗುವುದನ್ನು ತಡೆಯುವ ಹುನ್ನಾರವಾಗಿ ಆತನನ್ನು ರಾಕ್ಷಸ ಎಂದು ಬಿಂಬಿಸಿದರು ಎನ್ನಲಾಗುತ್ತಿದೆ. ಉದಾಹರಣೆಗೆ ಜಾರ್ಖಂಡ್‌ನ ಸಾಮಾಜಿಕ ಕಾರ್ಯಕರ್ತ ಅನಿಲ್ ಆಸುರ್ ಹೇಳುವಂತೆ, ಹಲವು ಪಠ್ಯಪುಸ್ತಕಗಳು ಹಿಂದೂ ಪುರಾಣವನ್ನು ವೈಭವೀಕರಿಸಿ, ನಮ್ಮ ಆದಿವಾಸಿ ಸಮುದಾಯದವರನ್ನು ದೇವರು ಹತ್ಯೆ ಮಾಡಿದ್ದಾಗಿ ಬಿಂಬಿಸುತ್ತಿವೆ. ಅಸುರರನ್ನು ರಾಕ್ಷಸರು ಎಂದು ಬಿಂಬಿಸಲಾಗುತ್ತಿದೆ. ನಮ್ಮ ಪೂರ್ವಜರ ಸಾಮೂಹಿಕ ಹತ್ಯೆ ಇದು

ಅಸುರ ಸಮುದಾಯ ಮಹಿಷಾಸುರನನ್ನು ಪೂರ್ವಜ ಎಂದು ಪರಿಗಣಿಸುತ್ತವೆ. ಅಂತೆಯೇ ಸಂತಾಲ ಹಾಗೂ ಭಿಲ್, ಯಾದವ, ಕುಶ್ವಾಹ ಹಾಗೂ ಕುಮ್ಹಾರ್ ಜಾತಿಗಳು ಸೇರಿದಂತೆ ಅಸಂಖ್ಯಾತ ಇತರ ಗುಂಪುಗಳು ಮಹಿಷಾಸುರನನ್ನು ತಮ್ಮ ಪೂರ್ವಜ ಎಂದು ಪರಿಗಣಿಸುತ್ತಾರೆ. ಬಿಹಾರದ ಸಾಮಾಜಿಕ ಕಾರ್ಯಕರ್ತ ನರೇಶ್ ಕುಮಾರ್ ಸೆಹ್ನಿ, ಮಹಿಷಾಸುರನ ವಿಸ್ತೃತ ಮನವಿಯ ಬಗ್ಗೆ ಹೀಗೆ ವಿವರಣೆ ನೀಡುತ್ತಾರೆ. ಮಹಿಷಾಸುರನ ಕಾಲದಲ್ಲಿ ಈಗಿನ ರೀತಿಯಲ್ಲಿ ಜಾತಿಪದ್ಧತಿ ಇತ್ತು ಎಂದು ನನಗಿಸುವುದಿಲ್ಲ. ಏಕೆಂದರೆ ಆತನ ಜಾತಿ ಯನ್ನು ನಿರ್ಧರಿಸಲಾಗದು. ಮಹಿಷಾಸುರ ಎಲ್ಲ ದೇಶವಾಸಿಗಳ ರಾಜ

ಮಹಿಷಾಸುರ ಆಚರಣೆ ಹೆಚ್ಚು ಪ್ರವರ್ಧಮಾನಕ್ಕೆ ಬಂದದ್ದು, 2011ರಲ್ಲಿ ಅಖಿತ ಭಾರತ ಹಿಂದುಳಿದ ವಿದ್ಯಾರ್ಥಿಗಳ ವೇದಿಕೆ ಜೆಎನ್‌ಯು ಘಟಕ ಮಹಿಷಾಸುರ ದಿನಾಚರಣೆಯನ್ನು ಹಾಸ್ಟೆಲ್‌ನಲ್ಲಿ ಹಮ್ಮಿಕೊಂಡಾಗ. ಇದು ಔಪಚಾರಿಕವಾಗಿ ನಡೆದ ಮೊಟ್ಟಮೊದಲ ಮಹಿಷಾಸುರ ದಿನ ಸಮಾರಂಭ. ಈ ಆಚರಣೆಗೆ ಮುನ್ನ ವಿದ್ಯಾರ್ಥಿಗಳು, ಬಹುಜನರು ಯಾರನ್ನು ನಿಜವಾಗಿ ಪೂಜಿಸುತ್ತಿದ್ದಾರೆ ಎಂಬ ಶೀರ್ಷಿಕೆಯ ಲೇಖನದ ಅಂಶಗಳನ್ನು ಒಳಗೊಂಡ ಪೋಸ್ಟರ್‌ಗಳನ್ನು ಹಂಚಿದರು. ಈ ಭಿತ್ತಿಪತ್ರಗಳು ಬಲಪಂಥೀಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರನ್ನು ಕೆರಳಿಸಿದವು. ಇವರು ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನೂ ನಡೆಸಿದರು ಎಂದು ವರದಿಯಾಗಿತ್ತು.

ಎಐಬಿಎಸ್‌ಎಫ್ ವಿದ್ಯಾರ್ಥಿಗಳು ಈ ನಿರ್ದೇಶನವನ್ನು ಹಲವರು ಅನುಸರಿಸಲು ಸ್ಫೂರ್ತಿಯಾದರು. ಪಶ್ಚಿಮ ಬಂಗಾಳದ ಜಲಘೋವಾಡದ ಸಮುದಾಯ ಸಂಘಟಕ ಚೆರಿಯನ್ ಮೆಹ್ತೊ ಅವರ ಪ್ರಕಾರ, ಜೆಎನ್‌ಯುನಲ್ಲಿ ಮಹಿಷಾಸುರ ದಿನ ಆಚರಿಸಿದ ವರದಿ ನೋಡಿದ ಬಳಿಕ ನಾವೂ ಆರಂಭಿಸಿದೆವು. ಇಂತಹ ಸಮಾರಂಭ ಏರ್ಪಡಿಸುವ ಆಸಕ್ತಿ ಸಮುದಾಯಗಳಲ್ಲಿ ಹೆಚ್ಚುತ್ತಾ ಹೋಯಿತು. ಮೆಹ್ತೊ ಹೇಳುವಂತೆ, 2013ರಲ್ಲಿ ಪಶ್ಚಿಮ ಬಂಗಾಳದಲ್ಲೇ ಇಂತಹ 24 ಸಮಾರಂಭಗಳು ನಡೆದಿದ್ದವು. 2014ರಲ್ಲಿ 74 ಹಾಗೂ 2015ರಲ್ಲಿ 182 ಸಮಾರಂಭಗಳು ನಡೆದಿವೆ. ಕಳೆದ ವರ್ಷ 20 ಸಾವಿರ ಮಂದಿ ಇದರಲ್ಲಿ ಪಾಲ್ಗೊಂಡಿದ್ದಾಗಿ ಮಹ್ತೊ ಹೇಳಿದರು.

ಇದುವರೆಗೆ ಹಲವು ಮಹಿಷಾಸುರ ದಿನಾಚರಣೆಯನ್ನು ಶರದ್ ಋತುವಿನ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಅಂದರೆ ವಿಜಯ ದಶಮಿಯಿಂದ ಐದು ದಿನಗಳ ಬಳಿಕ ಇದು ನಡೆಯುತ್ತದೆ. ಸಂಘಟಕರು ಹೇಳುವಂತೆ ಇದು ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಮಹಿಷಾಸುರನನ್ನು ದೇವರು ಎಂದು ಪೂಜಿಸುವಂತೆ ಯಾರನ್ನೂ ಒತ್ತಾಯಿಸಿಲ್ಲ. ಆದ್ದರಿಂದ ಜೆಎನ್‌ಯು ವಿದ್ಯಾರ್ಥಿಗಳು ಆತನನ್ನು ಪೂಜಿಸಿದ್ದಾರೆ ಎಂಬ ಪೊಲೀಸ್ ಪ್ರತಿಪಾದನೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಆದರೆ ಈ ಘಟನೆಗಳು ಜಾತ್ಯತೀತ ಸ್ವರೂಪ ಅವರನ್ನು ಭಾವನಾತ್ಮಕ ಘಟನೆಯಾಗಿ ಪರಿಗಣಿಸುವುದನ್ನು ತಡೆದಿಲ್ಲ. ಅನ್ಯಾಯದ ವಿರುದ್ಧದ ಅಭಿವ್ಯಕ್ತಿಗಳಿಗೆ ಕಣ್ಣೀರಿನ ಮೂಲಕ ಜನ ಸ್ಪಂದಿಸಿದ್ದಾರೆ.

ಈ ಸಮಾರಂಭಗಳು ದಿಲ್ಲಿ ಹಾಗೂ ಪಶ್ಚಿಮ ಬಂಗಾಳವನ್ನು ಮೀರಿ ಹರಡಿವೆ. ಅದರಲ್ಲೂ ಮುಖ್ಯವಾಗಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಭಾರತ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ ವ್ಯಾಪಕವಾಗಿದೆ. ರಾಂಚಿ ಮೂಲದ ಪತ್ರಕರ್ತೆ ಅಶ್ವಿನಿ ಪಂಜಕ್ ಅವರ ಪ್ರಕಾರ ಕಳೆದ ವರ್ಷ ದೇಶಾದ್ಯಂತ 350 ಮಹಿಷಾಸುರ ಸಮಾರಂಭಗಳು ನಡೆದಿವೆ. ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶ, ಒಡಿಶಾ ಹಾಗೂ ನೇಪಾಳದಲ್ಲೂ ಇಂತಹ ಸಮಾರಂಭಗಳು ನಡೆದಿವೆ ಎಂದು ಸಂಘಟಕರು ಹೇಳಿದ್ದಾರೆ. ಆದರೆ ಇದನ್ನು ಮಾಧ್ಯಮ ಅಷ್ಟಾಗಿ ಗಮನಿಸಿಲ್ಲ.

ಬೇಸರದ ವಿಚಾರವೆಂದರೆ ಆಡಳಿತವರ್ಗ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದೆ. ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ಇಂತಹ ಸಮಾರಂಭ ಏರ್ಪಡಿಸಿದ್ದ ಸುರಸೇನಜಿತ್ ವೈರಾಗಿ ಅವರಿಗೆ ಸ್ಥಳೀಯ ಪೊಲೀಸರು ಸಮಾರಂಭ ರದ್ದು ಮಾಡುವಂತೆ ಸೂಚಿಸಿದರು. ಆಗ ಅವರು, ಒಬ್ಬ ಪ್ರೀತಿಪಾತ್ರ ವ್ಯಕ್ತಿಗೆ ಶ್ರದ್ಧಾಂಜಲಿ ಸಲ್ಲಿಸಲು ಏಕೆ ಪೊಲೀಸ್ ಅನುಮತಿ ಬೇಕು ಎಂದು ಪ್ರಶ್ನಿಸಿದರು. ಆ ಬಳಿಕ ಪೊಲೀಸರು ಮಧ್ಯಪ್ರವೇಶಿಸಲಿಲ್ಲ.

ಆದರೆ ಇಂತಹ ನಿರ್ಬಂಧವನ್ನು ಮೀರುವುದು ಇತರ ಹಲವೆಡೆಗಳಲ್ಲಿ ಸಾಧ್ಯವಾಗಲಿಲ್ಲ. 2014ರಲ್ಲಿ ಜೆಎನ್‌ಯುನಲ್ಲಿ ಎಬಿವಿಪಿ ದೂರಿನ ಮೇರೆಗೆ ವಿಶ್ವವಿದ್ಯಾನಿಲಯ ಆಡಳಿತ ಮಹಿಷಾಸುರ ದಿನಾಚರಣೆಯನ್ನು ತಡೆಯುವಂತೆ ಕೊನೆಕ್ಷಣದಲ್ಲಿ ನೋಟಿಸ್ ಜಾರಿ ಮಾಡಿತು. ಆದರೆ ವಿದ್ಯಾರ್ಥಿಗಳು ತಮ್ಮ ನಿರ್ಧಾರದಂತೆ ಮುಂದುವರಿದಾಗ, ಎಬಿವಿಪಿ ಮತ್ತೊಂದು ದಾಂಧಲೆ ನಡೆಸಿತು. ಮಾನಹಾನಿಕರ ಚಿತ್ರಗಳಿರುವ ಕರಪತ್ರಗಳನ್ನು ವಿತರಿಸುವ ಮೂಲಕ ಸಂಘಟಕರು ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿತು. ದುರ್ಗೆ ಮಹಿಷಾಸುರನ ಜತೆ ಸಂಭೋಗದಲ್ಲಿ ತೊಡಗಿರುವ ಚಿತ್ರವನ್ನು ಸಂಘಟಕರು ಹಂಚುತ್ತಿದ್ದು, ಇದು ಗಂಭೀರ ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗುತ್ತದೆ ಎಂದು ದೂರಿದರು. ಇದಾದ ಬಳಿಕ ವಿಶ್ವವಿದ್ಯಾನಿಲಯ ಆಡಳಿತ ಹಿಂದೆ ಹೇರಿದ್ದ ನಿಷೇಧವನ್ನು ಮರು ಜಾರಿಗೊಳಿಸಿತು. ಇದರಿಂದ 2015ರಲ್ಲಿ ಮಹಿಷಾಸುರ ದಿನಾಚರಣೆ ನಡೆಯಲಿಲ್ಲ. 2011 ಹಾಗೂ 2014ರಲ್ಲಿ ಎಐಬಿಎಸ್‌ಎಫ್ ಅಧ್ಯಕ್ಷರಾಗಿದ್ದ ಜಿತೇಂದ್ರ ಯಾದವ್ ಅವರ ಪ್ರಕಾರ, ವಿಶ್ವವಿದ್ಯಾನಿಲಯ ಆಡಳಿತದ ಮೇಲೆ ಆರೆಸ್ಸೆಸ್ ಹಾಗೂ ಎಬಿವಿಪಿ ಪ್ರಭಾವ ಬೀರಿದೆ.

ಜೆಎನ್‌ಯು ಉದಾಹರಣೆಗಳು ಪ್ರಬಲ ಸಂಸ್ಕೃತಿಗೆ ಭಿನ್ನವಾದ ಆಚರಣೆಗಳನ್ನು ಹಮ್ಮಿಕೊಳ್ಳಲು ಸಂಘಟಕರಿಗೆ ಅತಂತ್ರ ಸ್ಥಿತಿಯನ್ನು ನಿರ್ಮಿಸಿರುವುದನ್ನು ಸೂಚಿಸುತ್ತವೆ. ಅದಾಗ್ಯೂ ಬಿಹಾರದ ಜಾತಿ ವಿರೋಧಿ ಚಳವಳಿಗಾರ ಹೀರಾ ಯಾದವ್, ಮಹಿಷಾಸುರನನ್ನು ನೆನಪಿಸಿಕೊಳ್ಳಲು ಬದ್ಧರಾಗಿದ್ದಾರೆ. 2011ರಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಮುಂದಾದಾಗ, ನನ್ನ ಕುಟುಂಬದ ಸದಸ್ಯರೇ ಇದನ್ನು ವಿರೋಧಿಸಿದರು. ದುರ್ಗೆ ಹಿಂದೂದೇವತೆ. ಆಕೆಯ ವಿರುದ್ಧ ಹೇಗೆ ಆಚರಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಇದೀಗ ಎಲ್ಲರಿಗೂ ಅದು ಧರ್ಮದ ಯುದ್ಧವಲ್ಲ ಎನ್ನುವುದು ಮನವರಿಕೆಯಾಗಿದೆ. ಅದು ಆರ್ಯರು ಹಾಗೂ ಇತರರ ನಡುವಿನ ಯುದ್ಧ. ಆದ್ದರಿಂದ ಅದೊಂದು ಐತಿಹಾಸಿಕ ಘಟನೆ. ಅದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಬ್ರಾಹ್ಮಣರು ಇಡೀ ಹಿಂದೂ ಸಮುದಾಯವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

(ಕೃಪೆ: ಕಾರವಾನ್ ನಿಯತಕಾಲಿಕ)

Writer - ಪ್ರಮೋದ್ ರಂಜನ್

contributor

Editor - ಪ್ರಮೋದ್ ರಂಜನ್

contributor

Similar News