ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ರೋಹಿತ್ ಶರ್ಮ ಡೌಟ್
ಮೀರ್ಪುರ,ಫೆ.29: ಗಾಯದ ಸಮಸ್ಯೆಗೆ ಒಳಗಾಗಿರುವ ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ ಸೋಮವಾರ ನೆಟ್ ಪ್ರಾಕ್ಟೀಸ್‌ನಿಂದ ದೂರ ಉಳಿದಿದ್ದಾರೆ. ಮಂಗಳವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಟ್ವೆಂಟಿ-20 ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಭಾರತದ ಇನ್ನೋರ್ವ ಆರಂಭಿಕ ದಾಂಡಿಗ ಶಿಖರ್ ಧವನ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಶೇರ್ ಇ ಬಾಂಗ್ಲಾ ಸ್ಟೇಡಿಯಂನ ಬಿಸಿಬಿ ಸ್ಟೇಡಿಯಂನಲ್ಲಿ ಎರಡೂವರೆ ಗಂಟೆಗಳ ಕಾಲ ನಡೆದ ನೆಟ್ ಸೆಶನ್‌ನಲ್ಲಿ ಭಾಗವಹಿಸಿದ್ದಾರೆ.
ರೋಹಿತ್ ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ವೇಗದ ಬೌಲರ್ ಮುಹಮ್ಮದ್ ಆಮಿರ್ ಎಸೆದ ಯಾರ್ಕರ್ ಎಸೆತದಲ್ಲಿ ಕಾಲುಬೆರಳಿಗೆ ನೋವಾಗಿತ್ತು. ಕಾಲು ನೋವಿನ ಕಾರಣದಿಂದ ಸೋಮವಾರ ಪ್ರಾಕ್ಟೀಸ್ ನಡೆಸದ ರೋಹಿತ್ ಹೊಟೇಲ್ ರೂಮ್‌ನಲ್ಲೇ ಉಳಿದುಕೊಂಡರು.
ರೋಹಿತ್ ಅದೃಷ್ಟವಶಾತ್ ದೊಡ್ಡ ಪ್ರಮಾಣದ ಗಾಯದಿಂದ ಪಾರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗಾಯಗೊಂಡಿರುವ ರೋಹಿತ್‌ರಂತಹ ಪ್ರಮುಖ ದಾಂಡಿಗರನ್ನು ಆಡಿಸುವ ಗೋಜಿಗೆ ಹೋಗದಿರಲು ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
ಸೋಮವಾರ ನೆಟ್ ಪ್ರಾಕ್ಟೀಸ್ ನಡೆಸಿರುವ ಧವನ್ ಬ್ಯಾಟಿಂಗ್, ಫೀಲ್ಡಿಂಗ್ ಪ್ರಾಕ್ಟೀಸ್ ನಡೆಸಿದರು. ಧವನ್ ಗಾಯದಿಂದಾಗಿ ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ.
ರೈನಾ, ಕೊಹ್ಲಿ ಹಾಗೂ ರಹಾನೆಯ ನಂತರ ಪಾರ್ಥಿವ್ ಪಟೇಲ್ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿದರು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ರಹಾನೆಯ ಆರಂಭಿಕ ಜೊತೆಗಾರನಾಗಿ ಯಾರು ಮೈದಾನಕ್ಕೆ ಇಳಿಯುತ್ತಾರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.