×
Ad

ಆಸಿಫ್, ಸಲ್ಮಾನ್ ಬಟ್‌ಗೆ ಮತ್ತೊಂದು ಅವಕಾಶ ನೀಡಬೇಕು: ಇಂಝಮಾಮ್

Update: 2016-03-01 23:51 IST

  ಹೊಸದಿಲ್ಲಿ, ಮಾ.1: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಜೈಲು ಶಿಕ್ಷೆ ಅನುಭವಿಸಿರುವ ಕಳಂಕಿತ ಮಾಜಿ ಸಹ ಆಟಗಾರರಾದ ಮುಹಮ್ಮದ್ ಆಸಿಫ್ ಹಾಗೂ ಸಲ್ಮಾನ್ ಬಟ್‌ಗೆ ಪಾಕಿಸ್ತಾನದ ಮಾಜಿ ನಾಯಕ ಇಂಝಮಾಮ್ ಉಲ್-ಹಕ್ ಬೆಂಬಲ ವ್ಯಕ್ತಪಡಿಸಿದ್ದಾರೆ.

‘‘ತಪ್ಪಿಗೆ ಶಿಕ್ಷೆ ಅನುಭವಿಸಿರುವ ಆಸಿಫ್ ಹಾಗೂ ಬಟ್‌ಗೆ ಎರಡನೆ ಅವಕಾಶ ನೀಡಬೇಕಾಗಿದೆ. ವ್ಯಕ್ತಿಯೋರ್ವ ಶಿಕ್ಷೆಯನ್ನು ಅನುಭವಿಸಿದ ನಂತರ ಆತನಿಗೆ ಬದುಕಲು ಬಿಡಬೇಕು. ಆಸಿಫ್ ಹಾಗೂ ಬಟ್‌ರೊಂದಿಗೆ ಶಿಕ್ಷೆ ಅನುಭವಿಸಿರುವ ಮುಹಮ್ಮದ್ ಆಮಿರ್ ಈಗಾಗಲೇ ಪಾಕ್ ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದಾರೆ’’ ಎಂದು ಹಕ್ ಅಭಿಪ್ರಾಯಪಟ್ಟರು.

ಆಸಿಫ್, ಆಮಿರ್ ಹಾಗೂ ಬಟ್ 2010ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಲಾರ್ಡ್ಸ್ ಟೆಸ್ಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ ಬ್ರಿಟನ್‌ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

 ಈ ಮೂವರ ಪೈಕಿ ಆಮಿರ್ ಈಗಾಗಲೇ ಪಾಕ್ ತಂಡಕ್ಕೆ ಮರಳಿದ್ದಾರೆ. ಆಸಿಫ್ ಹಾಗೂ ಬಟ್‌ರನ್ನು ಬದಿಗೆ ಸರಿಸಲಾಗಿದ್ದು, ಈ ಇಬ್ಬರಿಗೆ ಇದೇ ತಿಂಗಳು ಭಾರತದಲ್ಲಿ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಕಳೆದ ವರ್ಷ ಅಫ್ಘಾನಿಸ್ತಾನ ತಂಡಕ್ಕೆ ಕೋಚ್ ಆಗಿದ್ದ ಪಾಕ್‌ನ ಮಾಜಿ ಸ್ಫೋಟಕ ದಾಂಡಿಗ ಹಕ್ ಇದೀಗ ವಿಶ್ವಕಪ್ ತಯಾರಿಯಲ್ಲಿರುವ ಅಫ್ಘಾನ್ ತಂಡಕ್ಕೆ ಸಲಹೆ ನೀಡಲು ಭಾರತಕ್ಕೆ ಆಗಮಿಸಿದ್ದಾರೆ.

ಐಸಿಸಿ ಕಳೆದ ವರ್ಷ ಎಪ್ರಿಲ್‌ನಲ್ಲಿ ಆಮಿರ್‌ಗೆ ವಿಧಿಸಿದ್ದ ಐದು ರ್ವದ ನಿಷೇಧವನ್ನು ಹಿಂಪಡೆದಿತ್ತು. ಆಸಿಫ್ ಹಾಗೂ ಆಮಿರ್ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನ್ಯಾಶನಲ್ ಹಾಗೂ ಇಂಟರ್‌ನ್ಯಾಶನಲ್ ಪಂದ್ಯಗಳಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News