ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಭದ್ರತೆ ನೀಡಲು ಹಿಮಾಚಲ ಪ್ರದೇಶ ಸರಕಾರ ನಕಾರ
ಹೊಸದಿಲ್ಲಿ, ಮಾ.1: ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವೆ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಪಂದ್ಯಕ್ಕೆ ಭದ್ರತೆ ಒದಗಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶ ಸರಕಾರ ಮಂಗಳವಾರ ಹೇಳಿದೆ. ಸರಕಾರದ ಈ ಹೇಳಿಕೆಯಿಂದ ಇಂಡೋ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯ ಗೊಂದಲಕ್ಕೆ ಸಿಲುಕಿದೆ. ಧರ್ಮಶಾಲಾದಲ್ಲಿ ಮಾ.19 ರಂದು ಭಾರತ-ಪಾಕ್ ವಿಶ್ವಕಪ್ ಪಂದ್ಯ ನಿಗದಿಯಾಗಿದೆ. ಆದರೆ, ಇದೀಗ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್, ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ರಾಜ್ಯ ಸರಕಾರ ಭದ್ರತೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಂಗ್ ವರ್ತನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ, ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್,‘‘ ವಿಶ್ವಕಪ್ ಪಂದ್ಯ ತಿಂಗಳ ಹಿಂದೆಯೇ ನಿಗದಿಯಾಗಿದೆ ಎಂದು ರಾಜ್ಯ ಸರಕಾರಕ್ಕೆ ಗೊತ್ತಿದೆ. ಆದರೆ, ಆಗ ಏನೂ ಪ್ರತಿಕ್ರಿಯೆ ನೀಡದ ಸರಕಾರ ಇದೀಗ ಗೊಂದಲ ಸೃಷ್ಟಿಸುತ್ತಿದೆ’’ ಎಂದು ಆರೋಪಿಸಿದರು.
‘‘ಒಂದು ವರ್ಷದ ಹಿಂದೆ ವಿಶ್ವಕಪ್ ಪಂದ್ಯಗಳ ಸ್ಥಳಗಳನ್ನು ನಿರ್ಧರಿಸಲಾಗಿದ್ದು. ಆರು ತಿಂಗಳ ಹಿಂದೆ ಎಲ್ಲ ಸ್ಟೇಡಿಯಂಗಳಿಗೆ ಪಂದ್ಯಗಳನ್ನು ಹಂಚಲಾಗಿದೆ. ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ವಿಶ್ವಕಪ್‌ಗೆ ಎಲ್ಲ ಸಿದ್ಧತೆಗಳು ನಡೆದಿರುವಾಗ ಕೊನೆಯ ಕ್ಷಣದಲ್ಲಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ’’ ಎಂದು ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಕಾಂಗ್ರೆಸ್ ನೇತೃತ್ವದ ಹಿಮಾಚಲ ಪ್ರದೇಶ ಸರಕಾರ ರಾಜಕೀಯ ನಡೆಸುತ್ತಿದೆ. ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ನೂರಾರು ಪಾಕಿಸ್ತಾನಿ ಅಥ್ಲೀಟ್‌ಗಳಿಗೆ ಭದ್ರತೆ ಒದಗಿಸಲಾಗಿತ್ತು. ಇದೀಗ ಹಿಮಾಚಲ ಪ್ರದೇಶ ಸರಕಾರಕ್ಕೆ ಪಾಕ್ ಕ್ರಿಕೆಟಿಗರಿಗೆ ಭದ್ರತೆ ನೀಡಲು ಏಕೆ ಸಾಧ್ಯವಿಲ್ಲ?. ಇಂತಹ ಹೇಳಿಕೆಯಿಂದ ಪಾಕಿಸ್ತಾನ ತಂಡ ಭಾರತದಲ್ಲಿ ಭದ್ರತೆ ಭೀತಿಯಿದೆ ಎಂದು ಹೇಳಬಹುದು. ಇದು ದೇಶದ ಗೌರವದ ಪ್ರಶ್ನೆ. ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’’ ಎಂದು ಠಾಕೂರ್ ತಿಳಿಸಿದರು.