×
Ad

ಏಷ್ಯಾಕಪ್ ನಲ್ಲಿ ಭಾರತ ಫೈನಲ್‌ಗೆ

Update: 2016-03-01 22:34 IST

ಮೀರ್ಪುರ,ಮಾ.1: ಭಾರತ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯ ಏಳನೆ ಪಂದ್ಯದಲ್ಲಿ ಇಂದು ಶ್ರೀಲಂಕಾ ವಿರುದ್ಧ ಐದು ವಿಕೆಟ್‌ಗಳ ಜಯ ಗಳಿಸುವುದರೊಂದಿಗೆ ಫೈನಲ್ ಪ್ರವೇಶಿಸಿದೆ. ಇಲ್ಲಿನ ಶೇರ್ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 139 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ 142ರನ್ ಗಳಿಸಿ ಗೆಲುವಿನ ದಡ ಸೇರಿತು.

ವಿರಾಟ್ ಕೊಹ್ಲಿ ಔಟಾಗದೆ 56 ರನ್(47ಎ, 7ಬೌ) ಮತ್ತು ಯುವರಾಜ್ ಸಿಂಗ್ 35 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇವರು 4ನೆ ವಿಕೆಟ್‌ಗೆ 51 ರನ್‌ಗಳ ಜೊತೆಯಾಟ ನೀಡಿದರು. ಆರಂಭಿಕ ದಾಂಡಿಗ ಶಿಖರ್ ಧವನ್(1) ಎರಡನೆ ಓವರ್‌ನ ಮುಕ್ತಾಯಕ್ಕೆ ಔಟಾದಾಗ ತಂಡದ ಸ್ಕೋರ್ 11 ಆಗಿತ್ತು. ಬಳಿಕ ರೋಹಿತ್ ಶರ್ಮ 15 ರನ್, ಹಾರ್ದಿಕ್ ಪಾಂಡ್ಯ 1ರನ್ ಗಳಿಸಿ ನಿರ್ಗಮಿಸಿದರು. ನಾಯಕ ಧೋನಿ ಔಟಾಗದೆ 7 ರನ್ ಗಳಿಸಿದರು. ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ(25) ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿ ಮೂರನೆ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನೀಡಿದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತ್ತು. ಕಳೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸೋಲು ಅನುಭವಿಸಿದ್ದ ಶ್ರೀಲಂಕಾ ತಂಡದ ಬ್ಯಾಟಿಂಗ್ ಆರಂಭದಲ್ಲಿ ಕಳಪೆಯಾಗಿತ್ತು. ಶ್ರೀಲಂಕಾ ತಂಡ ಆಶೀಷ್ ನೆಹ್ರಾ, ಜಸ್‌ಪ್ರೀತ್‌ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ದಾಳಿಗೆ ತತ್ತರಿಸಿ, ಅಗ್ರ ಸರದಿಯ ವಿಕೆಟ್‌ಗಳನ್ನು ಬಹಳ ಬೇಗನೆ ಕೈ ಚೆಲ್ಲಿತು. 2.2ನೆ ಓವರ್‌ನ ಎರಡನೆ ಎಸೆತದಲ್ಲಿ ಆರಂಭಿಕ ದಾಂಡಿಗ ದಿನೇಶ್ ಚಾಂಡಿಮಲ್ ಅವರನ್ನು ಕಳೆದುಕೊಂಡಿತು. ಚಾಂಡಿಮಲ್ ಮೊದಲ ಓವರ್‌ನ ಎರಡನೆ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ತಂಡದ ಖಾತೆ ತೆರೆದಿದ್ದರು. ಆದರೆ ಬಳಿಕ ಬುಮ್ರಾ ಎಸೆದ ಎರಡನೆ ಓವರ್‌ನಲ್ಲಿ ದಿಲ್ಶನ್ ಮೂಲಕ ಕೇವಲ 1 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು. ಮುಂದಿನ ಓವರ್‌ನಲ್ಲಿ ನೆಹ್ರಾ ಅವರು ಚಾಂಡಿಮಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.


 ತಂಡದ ಸ್ಕೋರ್ 15ಕ್ಕೆ ತಲುಪುವಾಗ ಶ್ರೀಲಂಕಾ ಇನ್ನೊಂದು ವಿಕೆಟ್ ಕಳೆದುಕೊಂಡಿತು. ಜಯಸೂರ್ಯ(3) ನಿರ್ಗಮಿಸಿದರು. ಏಳನೆ ಓವರ್‌ನ ಮೊದಲ ಎಸೆತದಲ್ಲಿ ಆರಂಭಿಕ ದಾಂಡಿಗ ತಿಲಕರತ್ನೆ ದಿಲ್ಶನ್(18) ಅವರು ಪಾಂಡ್ಯ ಎಸೆತದಲ್ಲಿ ಅಶ್ವಿನ್‌ಗೆ ಕ್ಯಾಚ್ ನೀಡಿದರು. ಆಗ ಲಂಕಾದ ಸ್ಕೋರ್ 3 ವಿಕೆಟ್ ನಷ್ಟದಲ್ಲಿ 31 ಆಗಿತ್ತು.
ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ 3 ಬೌಂಡರಿಗಳನ್ನು ಒಳಗೊಂಡ 18 ರನ್ ರನ್ ಗಳಿಸಿ ಪಾಂಡ್ಯ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಐದನೆ ವಿಕೆಟ್‌ಗೆ ಕಪುಗೆಡೆರ ಮತ್ತು ಸಿರಿವರ್ಧನ 43 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನಲ್ಲಿ 16 ಓವರ್‌ಗಳಲ್ಲಿ 100ಕ್ಕೆ ಏರಿಸಿದರು.


17ನೆ ಓವರ್‌ನ ಮೊದಲ ಎಸೆತದಲ್ಲಿ ಕಪುಗೆಡೆರ(30) ನಿರ್ಗಮಿಸಿದರು. ಕಪುಗೆಡೆರ 32 ಎಸೆತಗಳಲ್ಲಿ 3 ಬೌಂಡರಿಗಳನ್ನು ಒಳಗೊಂಡ 30 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶನಕ 1 ರನ್ ಗಳಿಸಿದರು. ಸಿರಿವರ್ಧನ (22) , ತಿಸ್ಸರ ಪೆರೆರಾ (17), ಕುಲಸೇಕರ (13) ಎರಡಂಕೆಯ ಸ್ಕೋರ್ ದಾಖಲಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ಬುಮ್ರಾ, ಅಶ್ವಿನ್ ಮತ್ತು ಪಾಂಡ್ಯ ತಲಾ 2 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News