ಬೋಲ್ಟ್ ನಿರ್ಮಿಸಿದ್ದ ವಿಶ್ವ ದಾಖಲೆ ‘ಮುರಿದ’ ಜಸ್ಟಿನ್ ಗ್ಯಾಟ್ಲಿನ್!
ಟೋಕಿಯೋ, ಮಾ.2: ಅಮೆರಿಕದ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಜಮೈಕಾದ ‘ಓಟದ ರಾಜ’ ಉಸೇನ್ ಬೋಲ್ಟ್ ನಿರ್ಮಿಸಿದ್ದ 100 ಮೀ. ವಿಶ್ವ ದಾಖಲೆಯನ್ನು ಮುರಿದಿದ್ದಾರೆ!
ಆದರೆ, ಗ್ಯಾಟ್ಲಿನ್ ಅತ್ಯಂತ ರಭಸವಾಗಿ ಬೀಸಿದ ಫ್ಯಾನ್ ಗಾಳಿಯ ಸಹಾಯದಿಂದ ಈ ಸಾಧನೆ ಮಾಡಿದ್ದು, ಗ್ಯಾಟ್ಲಿನ್‌ರ ಈ ಸಾಧನೆ ಅಧಿಕೃತ ದಾಖಲೆಯಾಗಿ ಪರಿಗಣಿಸಲ್ಪಡುವುದಿಲ್ಲ.
ಜಪಾನ್‌ನ ಟಿವಿ ಶೋ ಗೇಮ್‌ಗಾಗಿ ನಡೆದ 100 ಮೀ. ಓಟದ ಸ್ಪರ್ಧೆಯಲ್ಲಿ ಕೇವಲ 9.45 ಸೆಕೆಂಡ್‌ನಲ್ಲಿ ಗುರಿ ತಲುಪಿದ ಗ್ಯಾಟ್ಲಿನ್ 2009ರ ಒಲಿಂಪಿಕ್ಸ್‌ನಲ್ಲಿ ಬೋಲ್ಟ್ 100 ಮೀ. ಓಟದಲ್ಲಿ ನಿರ್ಮಿಸಿದ್ದ ವಿಶ್ವ ದಾಖಲೆ (9.58 ಸೆ.)ಯನ್ನು ಮುರಿದರು. ಆದರೆ, ಗ್ಯಾಟ್ಲಿನ್ ಶರವೇಗದಲ್ಲಿ ಓಡಲು ಸಾಧ್ಯವಾಗಿಸಿದ್ದು ಫ್ಯಾನ್‌ಗಳು.
ಹೌದು, ಗ್ಯಾಟ್ಲಿನ್ ಓಟ ಆರಂಭಿಸಿದ ಸ್ಥಳದಲ್ಲಿ ದೈತ್ಯ ಗಾತ್ರದ ಫ್ಯಾನ್‌ನ್ನು ಇಡಲಾಗಿತ್ತು. ಟ್ರಾಕ್‌ನ ಎರಡೂ ಬದಿಗಳಲ್ಲಿ ಚಿಕ್ಕ ಫ್ಯಾನ್‌ಗಳನ್ನು ಇಡಲಾಗಿತ್ತು. ಗಂಟೆಗೆ 32 ಕಿ.ಮೀ.ವೇಗದಲ್ಲಿ ಬೀಸುತ್ತಿದ್ದ ಫ್ಯಾನ್ ಗಾಳಿಯ ನೆರವಿನಿಂದ ಗ್ಯಾಟ್ಲಿನ್ 9.45 ಸೆಕೆಂಡ್‌ನಲ್ಲಿ 100 ಮೀ. ಗುರಿ ತಲುಪಿದರು.
ಡೋಪಿಂಗ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿ 2010ರಲ್ಲಿ ಅಥ್ಲೆಟಿಕ್ಸ್‌ಗೆ ವಾಪಸಾಗಿದ್ದ 34ರ ಹರೆಯದ ಗ್ಯಾಟ್ಲಿನ್‌ಗೆ ಇತ್ತೀಚೆಗಿನ ದಿನಗಳಲ್ಲಿ ಬೋಲ್ಟ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಗ್ಯಾಟ್ಲಿನ್ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 9.74 ಸೆಕೆಂಡ್.
ಆಗಸ್ಟ್‌ನಲ್ಲಿ ರಿಯೋ ಒಲಿಂಪಿಕ್ಸ್‌ನಲ್ಲಿ ಅಮೆರಿಕವನ್ನು ಪ್ರತಿನಿಧಿಸಲಿರುವ ಗ್ಯಾಟ್ಲಿನ್ 100 ಮೀ. ಓಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ