ಏಷ್ಯಾಕಪ್: ನಾಯಕನಾಗಿ 200 ಸಿಕ್ಸರ್ ಸಿಡಿಸಿದ ಧೋನಿ ಹೊಸ ದಾಖಲೆ
ಮೀರ್ಪುರ,ಮಾ.2: ಭಾರತ ತಂಡ ಶ್ರೀಲಂಕಾದ ವಿರುದ್ಧ ಮಂಗಳವಾರ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಫೈನಲ್‌ಗೆ ತಲುಪಿದೆ.
ಧೋನಿ ಬಳಗಕ್ಕೆ ಇದು ಹ್ಯಾಟ್ರಿಕ್ ಗೆಲುವಾಗಿತ್ತು. ಈ ಪಂದ್ಯದಲ್ಲಿ ಧೋನಿ ನಾಯಕನಾಗಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲಿಗನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಭಾರತ-ಶ್ರೀಲಂಕಾ ನಡುವೆ ನಡೆದ ಏಷ್ಯಾಕಪ್‌ನ 7ನೆ ಪಂದ್ಯದ ಹೈಲೈಟ್ಸ್.....
* ಎಂಎಸ್ ಧೋನಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಮಾದರಿ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ಬಲಿ ಪಡೆದ ವಿಶ್ವದ ಎರಡನೆ ವಿಕೆಟ್‌ಕೀಪರ್ ಆಗಿದ್ದಾರೆ. ಪಾಕಿಸ್ತಾನ ಕಮ್ರಾನ್ ಅಕ್ಮಲ್ ವಿಕೆಟ್‌ಕೀಪಿಂಗ್‌ನಲ್ಲಿ 50ಕ್ಕೂ ಅಧಿಕ ಬಲಿ ಪಡೆದಿದ್ದಾರೆ.
*ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ 315 ಇನಿಂಗ್ಸ್‌ಗಳಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲಿಗನಾಗಿ ಹೊರಹೊಮ್ಮಿದ್ದಾರೆ. ರಿಕಿ ಪಾಂಟಿಂಗ್ 376 ಇನಿಂಗ್ಸ್‌ಗಳಲ್ಲಿ 171 ಸಿಕ್ಸರ್ ಸಿಡಿಸಿದ್ದರು.
*ಧೋನಿ ಟ್ವೆಂಟಿ-20 ತಂಡದ ನಾಯಕನಾಗಿ ಶೇ. 58.47 ಗೆಲುವಿನ ಸರಾಸರಿ ಹೊಂದಿದ್ದಾರೆ. 60 ಪಂದ್ಯಗಳ ಪೈಕಿ 34ರಲ್ಲಿ ಗೆಲುವು, 24ರಲ್ಲಿ ಸೋಲು, ಒಂದು ಟೈ ಹಾಗೂ ಮತ್ತೊಂದರಲ್ಲಿ ಫಲಿತಾಂಶ ಬಂದಿಲ್ಲ.
*ಭಾರತ ತಂಡ ಶ್ರೀಲಂಕಾ ವಿರುದ್ಧ ಆಡಿರುವ 10 ಟ್ವೆಂಟಿ-20 ಪಂದ್ಯಗಳ ಪೈಕಿ ಆರರಲ್ಲಿ ಜಯ, ನಾಲ್ಕರಲ್ಲಿ ಸೋತಿದೆ. ಗೆಲುವಿನ ಸರಾಸರಿ ಶೇ.60.
*ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಆಡಿರುವ ಮೂರನೆ ಪಂದ್ಯದಲ್ಲಿ 3ನೆ ಅರ್ಧಶತಕ(56ರನ್) ದಾಖಲಿಸಿದ್ದಾರೆ. ಕೊಹ್ಲಿ ಟ್ವೆಂಟಿ-20ಯಲ್ಲಿ ಒಟ್ಟು 13 ಅರ್ಧಶತಕ ಗಳನ್ನು ಬಾರಿಸಿದ್ದಾರೆ. ಬ್ರೆಂಡನ್ ಮೆಕಲಮ್(15) ಹಾಗೂ ಕ್ರಿಸ್ ಗೇಲ್(14) ಟಿ-20ಯಲ್ಲಿ ಅತ್ಯಂತ ಹೆಚ್ಚು ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.
*ಕೊಹ್ಲಿ ಈ ವರ್ಷ ಆಡಿರುವ ಟಿ-20ಯ ಆರು ಇನಿಂಗ್ಸ್‌ಗಳಲ್ಲಿ ಒಟ್ಟು 311 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳಿವೆ.
* ಕೊಹ್ಲಿ ಟಿ-20ಯಲ್ಲಿ ಏಳನೆ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಟಿ-20ಯಲ್ಲಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ದಾಖಲೆಯನ್ನು ಯುವರಾಜ್ ಸಿಂಗ್(7) ಅವರೊಂದಿಗೆ ಹಂಚಿಕೊಂಡಿದ್ದಾರೆ.