ಬ್ರೆಝಿಲ್ ಟೆನಿಸ್ ಓಪನ್‌ನಲ್ಲಿ ನಾಯಿಗಳ ಬಳಕೆ!
ಸಾವೊಪೌಲೊ, ಮಾ.2: ಬ್ರೆಝಿಲ್‌ನ ಸಾವೊಪೌಲೊ ಬೀದಿ ಬದಿಗಳಲ್ಲಿ ಅಲೆದಾಡುತ್ತಿದ್ದ ನಾಲ್ಕು ಶ್ವಾನಗಳು ಇದೀಗ ಬ್ರೆಝಿಲ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿವೆ.
ಚೆನ್ನಾಗಿ ತರಬೇತಿ ಪಡೆದಿರುವ ಈ ನಾಯಿಗಳು ಟೆನಿಸ್ ಕೋರ್ಟ್‌ನಲ್ಲಿ ಚೆಂಡನ್ನು ಹೆಕ್ಕುವ ಕೆಲಸ ಮಾಡುತ್ತಿವೆ. ಈ ನಾಯಿಗಳು ಬ್ರೆಝಿಲ್‌ನ ಅತ್ಯಂತ ದೊಡ್ಡ ನಗರ ಸಾವೊಪೌಲೊದಲ್ಲಿ ಯಾರಿಗೂ ಬೇಡವಾಗಿದ್ದವು.
ಶ್ವಾನ ಪ್ರೇಮಿ ಆ್ಯಂಡ್ರಿಯ ಬೆಕರ್ಟ್‌ರಿಂದ ತಿಂಗಳುಗಟ್ಟಲೆ ಚೆನ್ನಾಗಿ ಪಳಗಿರುವ ಈ ನಾಯಿಗಳು ಟೆನಿಸ್ ಕೋರ್ಟ್‌ನಿಂದ ಹೊರಗೆ ಬೀಳುವ ಚೆಂಡನ್ನು ಬಾಯಲ್ಲಿ ಕಚ್ಚಿಕೊಂಡು ಬಂದು ತರಬೇತುದಾರರಿಗೆ ಕೊಡುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಎಲ್ಲರ ಗಮನ ಸೆಳೆದಿವೆ.
ಈ ನಾಯಿಗಳಿಗೆ ಡ್ರೆಸ್ ಕೋಡ್ ಇದೆ. ಅವುಗಳ ಕುತ್ತಿಗೆ ಹಾಗೂ ಕಾಲುಗಳಿಗೆ ಕಿತ್ತಳೆ ಬಣ್ಣದ ರಿಬ್ಬನ್‌ನ್ನು ಕಟ್ಟಲಾಗಿದೆ. ಶುಕ್ರವಾರ ನಡೆಯಲಿರುವ ಸ್ಪೇನ್‌ನ ರಾಬರ್ಟೊ ಕಾರ್ಬಲ್ಲೆಸ್ ಬಾಯೆನ ಹಾಗೂ ಪೋರ್ಚುಗಲ್‌ನ ಗಸ್ಟಾವೊ ಎಲಿಯಸ್ ನಡುವಿನ ಎಟಿಪಿ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಚೆಂಡು ಹೆಕ್ಕುವ ಕೆಲಸ ಮಾಡಲಿವೆ.
‘‘ಬೀದಿನಾಯಿಗಳನ್ನು ಎಲ್ಲರೂ ನಿರ್ಲಕ್ಷಿಸುತ್ತಾರೆ. ನಾವು ಅದನ್ನು ದತ್ತು ಪಡೆದು, ಚೆನ್ನಾಗಿ ಪಳಗಿಸುತ್ತೇವೆ. ಟೆನಿಸ್‌ಕೋರ್ಟ್‌ನಲ್ಲಿ ಚೆಂಡಿನ ಹಾಗೂ ಮನುಷ್ಯನ ಚಲನೆಯ ಶಬ್ದವನ್ನು ಗ್ರಹಿಸುವಂತಹ ವಾತಾವರಣ ಸೃಷ್ಟಿಸುತ್ತೇವೆ’’ ಎಂದು ನಾಯಿಗಳನ್ನು ಪಳಗಿಸಿರುವ ಬೆಕರ್ಟ್ ಹೇಳುತ್ತಾರೆ.