ಅಂತಿಮ ಪಂದ್ಯದಲ್ಲಿ ಭಾರತ-ಯುಎಇ ಸೆಣಸು
ಮೀರ್ಪುರ, ಮಾ.2: ಶ್ರೀಲಂಕಾ ವಿರುದ್ಧದ ಕಳೆದ ಪಂದ್ಯದಲ್ಲಿ ಗೆಲುವಿನೊಂದಿಗೆ ಏಷ್ಯಾಕಪ್‌ನ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿರುವ ಭಾರತ ಗುರುವಾರ ಇಲ್ಲಿ ನಡೆಯಲಿರುವ ದುರ್ಬಲ ಯುಎಇ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ತರಲು ಬಯಸಿದೆ.
ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಕೆಲವು ಬದಲಾವಣೆಯ ಬಗ್ಗೆ ಸುಳಿವು ನೀಡಿದ್ದಾರೆ. ಅವಕಾಶದ ನಿರೀಕ್ಷೆಯಲ್ಲಿರುವವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಅಜಿಂಕ್ಯ ರಹಾನೆ ಇನ್ನೊಂದು ಪಂದ್ಯದಲ್ಲಿ ಅವಕಾಶ ಪಡೆಯಲಿದ್ದಾರೆ. ಶಿಖರ್ ಧವನ್ ಬದಲಿಗೆ ಸ್ಥಾನ ಪಡೆಯಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದರೂ, ರಹಾನೆಗೆ ಮಿಂಚಲು ಸಾಧ್ಯವಾಗಿರಲಿಲ್ಲ. ಯುವ ವೇಗಿ ಮುಹಮ್ಮದ್ ಆಮಿರ್ ಅವರ ಮೊದಲ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದ್ದರು. ಲಂಕಾ ವಿರುದ್ಧ ಗೆಲುವಿನೊಂದಿಗೆ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆಲ್‌ರೌಂಡರ್‌ಗಳ ಪ್ರದರ್ಶನ ತಂಡಕ್ಕೆ ಯಶಸ್ಸು ತಂದು ಕೊಟ್ಟಿದೆ. ಶ್ರೀಲಂಕಾದ ಅಗ್ರ ಸರದಿಯ ದಾಂಡಿಗರು ಭಾರತದ ಬೌಲರ್‌ಗಳನ್ನು ಎದುರಿಸುವಲ್ಲಿ ವಿಫಲರಾಗಿದ್ದರು. ಮಧ್ಯಮ ಸರದಿಯ ದಾಂಡಿಗರ ನೆರವಿನಲ್ಲಿ ಲಂಕಾ ತಂಡ 9 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿತ್ತು.
140 ಉತ್ತಮ ಮೊತ್ತ. 80 ಅಥವಾ 100 ರನ್ ಗಳಿಸಿದರೆ ಪ್ರೇಕ್ಷಕರ ಗಮನ ಸೆಳೆಯುವುದಿಲ್ಲ. ಭಾರತದ ಮಧ್ಯಮ ಸರದಿಯ ದಾಂಡಿಗರಾದ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಬ್ಯಾಟಿಂಗ್ ಬಗ್ಗೆ ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಶೀಷ್ ನೆಹ್ರಾ 37ನೆ ವರ್ಷಕ್ಕೆ ಕಾಲಿರಿಸಲು ಇನ್ನು ಒಂದು ತಿಂಗಳು ಬಾಕಿ ಇದೆ. ಸತತ 9 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರುವ ಅವರು ವಿಶ್ರಾಂತಿ ಬಯಸಿಲ್ಲ. 31 ಓವರ್‌ಗಳಲ್ಲಿ 12 ವಿಕೆಟ್ ಪಡೆದಿದ್ದಾನೆ.
ಟೂರ್ನಿಯಲ್ಲಿ ಹರ್ಭಜನ್ ಸಿಂಗ್ ಮತ್ತು ಪವನ್ ನೇಗಿ ಈ ತನಕ ಆಡಿಲ್ಲ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಗೆ ವಿಶ್ರಾಂತಿ ನೀಡಿದಲ್ಲಿ ತೆರವಾಗುವ ಸ್ಥಾನದಲ್ಲಿ ಅವಕಾಶ ಪಡೆಯವ ನಿರೀಕ್ಷೆಯಲ್ಲಿದ್ದಾರೆ.
ಭಾರತ:ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಆಶೀಷ್ ನೆಹ್ರಾ, ಜಸ್‌ಪ್ರೀತ್ ಬುಮ್ರಾ, ಪವನ್ ನೇಗಿ, ಹರ್ಭಜನ್ ಸಿಂಗ್, ಅಜಿಂಕ್ಯ ರಹಾನೆ, ಭುವನೇಶ್ವರ ಕುಮಾರ್, ಪಾರ್ಥಿವ್ ಪಟೇಲ್.
ಯುಎಇ: ಅಮ್ಜದ್ ಜಾವೇದ್(ನಾಯಕ), ಅಹ್ಮದ್ ರಝಾ, ಮುಹಮ್ಮದ್ ರಝಾ, ಮುಹಮ್ಮದ್ ನವೀದ್, ಮುಹಮ್ಮದ್ ಶಹಝಾದ್, ಮುಹಮ್ಮದ್ ಕಲೀಮ್, ಮುಹಮ್ಮದ್ ಉಸ್ಮಾನ್, ಸ್ವಪ್ನಿಲ್ ಪಾಟೀಲ್(ವಿಕೆಟ್ ಕೀಪರ್), ಖದೀರ್ ಅಹ್ಮದ್ , ರೋಹನ್ ಮುಸ್ತಾಫ, ಸಕ್ಲೈನ್ ಹೈದರ್, ಶೈಮನ್ ಅನ್ವರ್, ಉಸ್ಮಾನ್ ಮುಶ್ತಾಕ್, ಝಹೀರ್ ಮಕ್ಸೂದ್.