ಲಾರೆಸ್ ಅವಾರ್ಡ್: ಸ್ಪರ್ಧೆಯಲ್ಲಿ ಜೊಕೊವಿಕ್, ಬೋಲ್ಟ್, ಮೆಸ್ಸಿ
ಲಂಡನ್,ಮಾ.2: 2015ರ ಸಾಲಿನ ಶ್ರೇಷ್ಠ ಅಥ್ಲೀಟ್‌ಗೆ ನೀಡಲಾಗುವ ಲಾರೆಸ್ ಅವಾರ್ಡ್‌ಗೆ ನೊವಾಕ್ ಜೊಕೊವಿಕ್, ಉಸೇನ್ ಬೋಲ್ಟ್ ಹಾಗೂ ಲಿಯೊನೆಲ್ ಮೆಸ್ಸಿ ಸಹಿತ ಆರು ಅಥ್ಲೀಟ್‌ಗಳು ಸ್ಪರ್ಧೆಯಲ್ಲಿದ್ದಾರೆ.
17ನೆ ಆವೃತ್ತಿಯ ಲಾರೆಸ್ ವಿಶ್ವ ಸ್ಪೋರ್ಟ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಜರ್ಮರ್ನಿಯ ಬರ್ಲಿನ್‌ನಲ್ಲಿ ಎಪ್ರಿಲ್ 16 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೇಷ್ಠ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನಿಸಲಾಗುತ್ತದೆ.
2015ರಲ್ಲಿ ಜೊಕೊವಿಕ್ ಮೂರು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಜಮೈಕಾದ ಓಟದ ರಾಜ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
2015ರಲ್ಲಿ ಪ್ರತಿಷ್ಠಿತ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಜಯಿಸಿದ್ದ ಅರ್ಜೆಂಟೀನದ ಫುಟ್ಬಾಲ್ ಸ್ಟಾರ್ ಮೆಸ್ಸಿ, ಫಾರ್ಮುಲಾ ಒನ್ ಚಾಲಕ ಲೂವಿಸ್ ಹ್ಯಾಮಿಲ್ಟನ್, ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ಸ್ಟೀಫನ್ ಕರ್ರಿ ಹಾಗೂ ಗಾಲ್ಫರ್ ಜೋರ್ಡನ್ ಸ್ಪೆಥ್ ಪ್ರಶಸ್ತಿ ಸ್ಪರ್ಧೆಯಲ್ಲಿದ್ದಾರೆ.
2015ರಲ್ಲಿ ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದ ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಲಾರೆಸ್ ಅವಾರ್ಡ್ ಮಹಿಳಾ ಟ್ರೋಫಿಗಾಗಿ ಉಳಿದ ಐದು ಅಥ್ಲೀಟ್‌ಗಳಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.
ನ್ಯೂಝಿಲೆಂಡ್‌ನ ರಗ್ಬಿ ತಂಡ ಆಲ್ ಬ್ಲಾಕ್ಸ್ ವರ್ಷದ ಶ್ರೇಷ್ಠ ತಂಡದ ಪ್ರಶಸ್ತಿಯ ರೇಸ್‌ನಲ್ಲಿದೆ. ಆಲ್‌ಬ್ಲಾಕ್ಸ್ ತಂಡ 2015ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ರಗ್ಬಿ ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತ್ತು.