ಅಶಿಸ್ತಿನ ವರ್ತನೆ: ಗೋವಾ ಎಫ್‌ಸಿಗೆ 50 ಲಕ್ಷ ರೂ. ದಂಡ
Update: 2016-03-04 23:31 IST
ಹೊಸದಿಲ್ಲಿ, ಮಾ.4: ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ 2-3 ಅಂತರದಿಂದ ಸೋತ ನಂತರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿದ್ದ ಗೋವಾ ಎಫ್‌ಸಿಗೆ ಎಐಎಫ್‌ಎಫ್ ಶುಕ್ರವಾರ 50 ಲಕ್ಷ ರೂ. ದಂಡ ವಿಧಿಸಿದೆ.
2015ರ ಐಎಸ್‌ಎಲ್ ಫೈನಲ್‌ನ ಪ್ರಶಸ್ತಿ ಸಮಾರಂಭದಲ್ಲಿ ಹಾಜರಾಗದೇ ಅಶಿಸ್ತಿನಿಂದ ವರ್ತಿಸಿದ್ದ ಎಫ್‌ಸಿ ಗೋವಾಕ್ಕೆ 50 ಲಕ್ಷ ರೂ. ದಂಡ ವಿಧಿಸಲಾಗಿದ್ದು, ದಂಡವನ್ನು 10 ದಿನಗಳೊಳಗೆ ಪಾವತಿಸಬೇಕು ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಹೇಳಿದೆ.
ಎಫ್‌ಸಿ ಗೋವಾ ತಂಡದ ಸಹ ಮಾಲಕ ದತ್ತರಾಜ್ ಸಲ್ಗಾಂವ್ಕರ್ ಗೆ ನಿಂದಿಸಿದ್ದ ಚೆನ್ನೈಯಿನ್ ತಂಡದ ಪ್ರಮುಖ ಆಟಗಾರ ಎಲಾನೊ ಬ್ಲುಮರ್ ವಿರುದ್ಧ ಐಎಸ್‌ಎಲ್ ಪ್ರಾಧಿಕಾರ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನಾವು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿದ್ದೆವು ಎಂದು ಎಫ್‌ಸಿ ಗೋವಾ ಪ್ರಕಟನೆಯಲ್ಲಿ ತಿಳಿಸಿದೆ.