×
Ad

ಇಂದು ಏಷ್ಯಾಕಪ್ ಫೈನಲ್:ಪ್ರಶಸ್ತಿಗಾಗಿ ಭಾರತ-ಬಾಂಗ್ಲಾ ಪೈಪೋಟಿ

Update: 2016-03-05 23:44 IST

ಮೀರ್ಪುರ, ಮಾ.5: ಏಷ್ಯಾಕಪ್ ಟ್ವೆಂಟಿ-20 ಟೂರ್ನಮೆಂಟ್‌ನ ಫೈನಲ್ ಪಂದ್ಯ ರವಿವಾರ ಇಲ್ಲಿನ ಶೇರ್-ಇ- ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿದ್ದು, ಸತತ ಗೆಲುವಿನಿಂದ ಬೀಗುತ್ತಿರುವ ಭಾರತ ತಂಡ ಸ್ಫೂರ್ತಿಯುತ ಪ್ರದರ್ಶನದಿಂದ ಗಮನ ಸೆಳೆಯುತ್ತಿರುವ ಆತಿಥೇಯ ಬಾಂಗ್ಲಾದೇಶದ ಸವಾಲು ಎದುರಿಸಲು ಸನ್ನದ್ಧವಾಗಿದೆ.

ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತ ನಂ.1 ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 10ನೆ ಸ್ಥಾನದಲ್ಲಿದೆ. ಆದರೆ, ಚುಟುಕು ಮಾದರಿಯ ಪಂದ್ಯದಲ್ಲಿ ಈ ರ್ಯಾಂಕಿಂಗ್ ಗಣನೆಗೆ ಬರುವುದಿಲ್ಲ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕೇವಲ ಒಂದೇ ಓವರ್‌ನಲ್ಲಿ ಪಂದ್ಯದ ದಿಕ್ಕು ಬದಲಾಗುತ್ತದೆ.

ಫೈನಲ್‌ನಲ್ಲಿ ಬಾಂಗ್ಲಾದ ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್‌ಗೆ ಭಾರತದ ಹೊಸ ಬೌಲರ್ ಜಸ್ಪ್ರೀತ್ ಬುಮ್ರಾ, ಯುವ ದಾಂಡಿಗ ಸೌಮ್ಯ ಸರ್ಕಾರ್‌ಗೆ ಹಿರಿಯ ಬೌಲರ್ ಆಶೀಷ್ ನೆಹ್ರಾ, ಶಬ್ಬೀರ್ರಹ್ಮಾನ್‌ಗೆ ಆರ್. ಅಶ್ವಿನ್, ರೋಹಿತ್ ಶರ್ಮಗೆ ಯುವ ಬೌಲರ್ ತಸ್ಕಿನ್ ಅಹ್ಮದ್ ಸವಾಲು ಎದುರಾಗಲಿದೆ.

ಟ್ವೆಂಟಿ-20 ವಿಶ್ವಕಪ್‌ಗೆ ಸೂಕ್ತ ತಯಾರಿ: ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸುವುದು ತವರಿನಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಸರಿಯಾದ ತಯಾರಿ ಎಂದು ಭಾರತ ನಂಬಿದೆ. ಎದುರಾಳಿ ಬಾಂಗ್ಲಾದೇಶ ಕೂಡ ವಿಶ್ವಕಪ್‌ಗೆ ಮೊದಲು ತವರು ನೆಲದಲ್ಲಿ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಏಷ್ಯಾಕಪ್ ಫೈನಲ್ ಪಂದ್ಯ ಟ್ವೆಂಟಿ-20 ಸ್ಪೆಷಲಿಸ್ಟ್‌ಗಳನ್ನು ಹೊಂದಿರುವ ಭಾರತ ಹಾಗೂ ಸ್ಥಿರ ಪ್ರದರ್ಶನ ನೀಡಲು ಯತ್ನಿಸುತ್ತಿರುವ ಬಾಂಗ್ಲಾದೇಶದ ನಡುವಿನ ಹೋರಾಟವಾಗಿದೆ.

ಧೋನಿ, ಯುವರಾಜ್ ಹಾಗೂ ವಿರಾಟ್ ಕೊಹ್ಲಿ ಫೈನಲ್ ಪಂದ್ಯ ಹೊಸತೇನಲ್ಲ. ಈ ಮೂವರು ಈವರೆಗೆ ಸಾಕಷ್ಟು ಫೈನಲ್ ಆಡಿದ್ದಾರೆ. ಬಾಂಗ್ಲಾದೇಶಕ್ಕೆ ಚೊಚ್ಚಲ ಪ್ರಶಸ್ತಿ ಕನಸು: 2012ರ ಏಷ್ಯಾಕಪ್‌ನಲ್ಲಿ ಪ್ರಶಸ್ತಿಯ ಸನಿಹ ತಲುಪಿದ್ದ ಬಾಂಗ್ಲಾದೇಶ ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.

ನಾಯಕ ಮಶ್ರಾಫೆ ಮುರ್ತಝ, ಶಾಕಿಬ್ ಅಲ್ ಹಸನ್, ಮಹ್ಮೂದುಲ್ಲಾ ರಿಯಾದ್ ತಂಡಕ್ಕೆ ಪ್ರಶಸ್ತಿ ತಂದುಕೊಡುವ ವಿಶ್ವಾಸದಲ್ಲಿದ್ಧಾರೆ. ಮಹ್ಮೂದುಲ್ಲಾ ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಪರ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

ಭಾರತವೇ ಫೇವರಿಟ್: ಅಡಿಲೇಡ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಟ್ವೆಂಟಿ-20 ಸರಣಿಯನ್ನು ಜಯಿಸಿದ ಬಳಿಕ ಧೋನಿ ಪಡೆ ಆಡಿರುವ 10 ಪಂದ್ಯಗಳ ಪೈಕಿ 9ರಲ್ಲಿ ಜಯ ಸಾಧಿಸಿದೆ. ಇದೀಗ 11ನೆ ಪಂದ್ಯವನ್ನು ಬಾಂಗ್ಲಾದೇಶದಲ್ಲಿ ಆಡುತ್ತಿರುವ ಭಾರತಕ್ಕೆ ಗೆಲುವು ಸುಲಭಸಾಧ್ಯವಲ್ಲ. ಆತಿಥೇಯ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾಗೆ ಒತ್ತಡ ಸೃಷ್ಟಿಸಬಹುದು. ಆದರೆ, ಈ ಇಬ್ಬರು ಆಟಗಾರರಿಗೆ ಐಪಿಎಲ್‌ನಲ್ಲಿ ಒತ್ತಡದ ವಾತಾವರಣದಲ್ಲಿ ಆಡಿದ ಅನುಭವವಿದೆ.

ರೋಹಿತ್ ಅಗ್ರ ಸ್ಕೋರರ್: ಪ್ರಸ್ತುತ ಏಷ್ಯಾಕಪ್‌ನಲ್ಲಿ ಭಾರತದ ಅಗ್ರ ಕ್ರಮಾಂಕದ ದಾಂಡಿಗ ರೋಹಿತ್ ಶರ್ಮ ಒಟ್ಟು 137 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದಾರೆ. ಧವನ್‌ಗೆ ನಾಯಕನ ಬೆಂಬಲವಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.

ಕೊಹ್ಲಿ ಟೂರ್ನಿಯಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಮತ್ತೊಂದು ಮಹತ್ವದ ಕಾಣಿಕೆ ನೀಡುವ ಮೂಲಕ ಟೂರ್ನಿಯನ್ನು ಕೊನೆಗೊಳಿಸುವ ವಿಶ್ವಾಸದಲ್ಲಿದ್ದಾರೆ. ಯುವರಾಜ್ ಸಿಂಗ್ ಶ್ರೀಲಂಕಾ ಹಾಗೂ ಯುಎಇ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾಯಕ ಧೋನಿ ಟೂರ್ನಿಯ ಮೊದಲ ಕೆಲವು ಪಂದ್ಯಗಳಲ್ಲಿ ಸಂಪೂರ್ಣ ಫಿಟ್ ಇಲ್ಲದಿದ್ದರೂ ನಾಯಕತ್ವ ಹಾಗೂ ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಆಲ್‌ರೌಂಡರ್ ಪಾಂಡ್ಯ ಬಾಂಗ್ಲಾದೇಶದ ವಿರುದ್ಧ ಆರಂಭಿಕ ಪಂದ್ಯದಲ್ಲಿ 18 ಎಸೆತಗಳಲ್ಲಿ 31 ರನ್ ಗಳಿಸಿ ಮಿಂಚಿದ್ದರು.

ರೋಹಿತ್ ಶರ್ಮ ಹಾಗೂ ಧವನ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಅಶ್ವಿನ್, ರವೀಂದ್ರ ಜಡೇಜ ಹಾಗೂ ನೆಹ್ರಾ ಅಂತಿಮ 11ರಲ್ಲಿ ಸ್ಥಾನ ಪಡೆಯುವುದು ನಿಶ್ಚಿತ. ಮತ್ತೊಂದೆಡೆ ಬಾಂಗ್ಲಾದೇಶ ತಂಡ ಪಾಕಿಸ್ತಾನ ವಿರುದ್ಧ ಆಡಿರುವ ತಂಡವನ್ನೇ ಉಳಿಸಿಕೊಳ್ಳುವ ಸಂಭವವಿದೆ. ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಅನುಪಸ್ಥಿತಿಯಲ್ಲಿ ಆತಿಥೇಯರು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಪಾಕ್ ವಿರುದ್ಧ 2 ನಿರ್ಣಾಯಕ ವಿಕೆಟ್ ಪಡೆದಿರುವ ಅರಾಫತ್ ಸನ್ನಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಪಂದ್ಯ ಆರಂಭದ ಸಮಯ: ರಾತ್ರಿ 7:00

ತಂಡಗಳು

ಭಾರತ: ಎಂಎಸ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್.ಅಶ್ವಿನ್, ಆಶೀಷ್ ನೆಹ್ರಾ, ಜಸ್‌ಪ್ರೀತ್ ಬುಮ್ರಾ, ಅಜಿಂಕ್ಯ ರಹಾನೆ, ಹರ್ಭಜನ್ ಸಿಂಗ್, ಪವನ್ ನೇಗಿ, ಭುವನೇಶ್ವರ ಕುಮಾರ್.

ಬಾಂಗ್ಲಾದೇಶ: ಮಶ್ರಾಫೆ ಮುರ್ತಝ(ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಬೀರ್ ರಹ್ಮಾನ್, ಮುಶ್ಫಿಕುರ್ರಹೀಮ್, ಶಾಕಿಬ್ ಅಲ್ ಹಸನ್, ಮಹ್ಮೂದುಲ್ಲಾ, ಮುಹಮ್ಮದ್ ಮಿಥುನ್, ಅರಫತ್ ಸನ್ನಿ, ತಸ್ಕಿನ್ ಅಹ್ಮದ್, ಅಲ್-ಅಮಿನ್ ಹುಸೈನ್, ನಾಸಿರ್ ಹುಸೈನ್, ಅಬು ಹೈದರ್, ನುರುಲ್ ಹಸನ್, ಇಮ್ರುಲ್ ಖೈಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News