ಇಂದು ಚುಟುಕು ವಿಶ್ವಕಪ್‌ಗೆ ಚಾಲನೆ, ಅರ್ಹತಾ ಸುತ್ತು: ಝಿಂಬಾಬ್ವೆ-ಹಾಂಕಾಂಗ್, ಸ್ಕಾಟ್ಲೆಂಡ್-ಅಫ್ಘಾನಿಸ್ತಾನ ಸೆಣಸು
ನಾಗ್ಪುರ, ಮಾ.7: ‘ಕಿತ್ತಳೆ ನಗರಿ’ ನಾಗ್ಪುರದಲ್ಲಿ ಮಂಗಳವಾರ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗುವ ಮೂಲಕ ಆರನೆ ಆವೃತ್ತಿಯ ಐಸಿಸಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ ಭಾರತವೇ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ.
ಬಿ ಗುಂಪಿನಲ್ಲಿ ಬಲಿಷ್ಠ ತಂಡಗಳೊಂದಿಗೆ ಸ್ಥಾನ ಪಡೆದಿರುವ ಭಾರತ ಪ್ರಸ್ತುತ ಪ್ರಚಂಡ ಫಾರ್ಮ್‌ನಲ್ಲಿದ್ದು, ಸೆಮಿಫೈನಲ್‌ಗೆ ತಲುಪುವುದು ನಿಶ್ಚಿತವಾಗಿದೆ. ಮಾ.15 ರಂದು ವಿಶ್ವಕಪ್‌ನ ಸೂಪರ್ 10 ಪಂದ್ಯಗಳು ಆರಂಭವಾಗಲಿದೆ. ಸೂಪರ್-10 ಹಂತದ ಬಳಿಕ ವಿಶ್ವಕಪ್‌ನ ನೈಜ ಹೋರಾಟ ಆರಂಭವಾಗಲಿದೆ. ಮಾ.15 ರಂದು ಭಾರತ ತಂಡ ನ್ಯೂಝಿಲೆಂಡ್‌ನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮಾ.19 ರಂದು ಪಾಕಿಸ್ತಾನ, ಮಾ.23 ರಂದು ಕ್ವಾಲಿಫೈಯರ್ ತಂಡ ಹಾಗೂ ಮಾ.27 ರಂದು ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ವಿಶ್ವಕಪ್‌ನ ಮೊದಲ ದಿನವಾದ ಮಂಗಳವಾರ ಅರ್ಹತಾ ಸುತ್ತಿನಲ್ಲಿ ಎರಡು ಪಂದ್ಯಗಳು ನಡೆಯುತ್ತವೆ. ಝಿಂಬಾಬ್ವೆ-ಹಾಂಕಾಂಗ್, ಸ್ಕಾಟ್ಲೆಂಡ್-ಅಫ್ಘಾನಿಸ್ತಾನ ತಂಡಗಳು ಸೆಣಸಾಡಲಿವೆ. ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿರುವ ‘ಎ’ ಹಾಗೂ ಬಿ ಗುಂಪಿನಲ್ಲಿರುವ 8 ತಂಡಗಳ ಪೈಕಿ ಅಗ್ರ 2 ತಂಡಗಳು ಪ್ರಧಾನ ಸುತ್ತಿಗೆ ತೇರ್ಗಡೆಯಾಗುತ್ತವೆ. ಈ ತಂಡಗಳು ಸೂಪರ್-10ರಲ್ಲಿ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕ, ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳೊಂದಿಗೆ ಸೇರ್ಪಡೆಯಾಗಲಿವೆೆ.
ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಪ್ರಸ್ತುತ ಕಳಪೆ ಫಾರ್ಮ್‌ನಲ್ಲಿದ್ದು, ಇತ್ತೀಚೆಗೆ ಭಾರತದ ಪ್ರವಾಸದ ವೇಳೆ ಟ್ವೆಂಟಿ-20 ಸರಣಿಯನ್ನು 1-2 ರಿಂದ ಸೋತಿತ್ತು. ಶ್ರೀಲಂಕಾ ಸೂಪರ್ 10ರಲ್ಲಿ ಗ್ರೂಪ್-1ರಲ್ಲಿ ದಕ್ಷಿಣ ಆಫ್ರಿಕ, ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ಇನ್ನಷ್ಟೇ ಅರ್ಹತೆ ಪಡೆಯಲಿರುವ ತಂಡಗಳೊಂದಿಗಿದೆ.
2007ರ ಚಾಂಪಿಯನ್ ಭಾರತ ಈ ಬಾರಿ ತವರು ನೆಲದಲ್ಲಿ ಪ್ರಶಸ್ತಿ ಎತ್ತುವ ವಿಶ್ವಾಸದಲ್ಲಿದೆ. ವಿದೇಶದಲ್ಲಿ ಸತತ 8ನೆ ಗೆಲುವಿನ ಮೂಲಕ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಜಯಿಸಿರುವ ಎಂಎಸ್ ಧೋನಿ ಪಡೆ ವಿಶ್ವದ ನಂ.1 ತಂಡವಾಗಿ ವಿಶ್ವಕಪ್ ಆಖಾಡಕ್ಕೆ ಇಳಿಯಲಿದೆ. ಭಾರತ ಸೂಪರ್10ರಲ್ಲಿ ಗ್ರೂಪ್2ರಲ್ಲಿದ್ದು, ಪಾಕಿಸ್ತಾನ, ಆಸ್ಟ್ರೇಲಿಯ, ನ್ಯೂಝಿಲೆಂಡ್ ಹಾಗೂ ಕ್ವಾಲಿಫೈಯರ್ ತಂಡದೊಂದಿಗೆ ಸ್ಥಾನ ಪಡೆದಿದೆ.