ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್: ಭಾರತ ನಂ.1
ದುಬೈ, ಮಾ.7: ಮೀರ್ಪುರದಲ್ಲಿ ರವಿವಾರ ಏಷ್ಯಾಕಪ್‌ನ್ನು ಜಯಿಸಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ತಲುಪಿದೆ. ತವರಿನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನಂ.1 ತಂಡವಾಗಿ ಕಣಕ್ಕಿಳಿಯಲಿದೆ. ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ್ದ ಭಾರತ ಏಷ್ಯಾಕಪ್ ಟ್ರೋಫಿಯನ್ನು ಜಯಿಸಿತ್ತು. ಈ ಮೂಲಕ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸುವ ಹಾಟ್ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.
ಜೋಹಾನ್ಸ್‌ಬರ್ಗ್‌ನಲ್ಲಿ ರವಿವಾರ ನಡೆದ 2ನೆ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕ ನೀಡಿದ್ದ 204 ರನ್ ಯಶಸ್ವಿಯಾಗಿ ಬೆನ್ನತ್ತಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತ್ತು. ಆದಾಗ್ಯೂ ಭಾರತ ತಂಡವನ್ನು ನಂ.1 ಸ್ಥಾನದಿಂದ ಅಲುಗಾಡಿಸಲು ಆಸ್ಟ್ರೇಲಿಯಕ್ಕೆ ಸಾಧ್ಯವಾಗಿಲ್ಲ. ಭಾರತ ನಂ.1 ತಂಡವಾಗಿ ವಿಶ್ವಕಪ್ ಪ್ರವೇಶಿಸಲಿದೆ. ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ ಚೊಚ್ಚಲ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತ ಇದೀಗ 127 ಅಂಕವನ್ನು ಗಳಿಸಿದ್ದು, ವೆಸ್ಟ್‌ಇಂಡೀಸ್(118) ಹಾಗೂ ದಕ್ಷಿಣ ಆಫ್ರಿಕ(118)ಕ್ಕಿಂತ 9 ಅಂಕ ಮುಂದಿದೆ. ನ್ಯೂಝಿಲೆಂಡ್(116) 4ನೆ ಸ್ಥಾನ, ಇಂ ಗ್ಲೆಂಡ್ 5ನೆ ಸ್ಥಾನ, ಆಸ್ಟ್ರೇಲಿಯ 6ನೆ, ಪಾಕಿಸ್ತಾನ 7ನೆ, ಹಾಲಿ ಚಾಂಪಿಯನ್ ಶ್ರೀಲಂಕಾ 8ನೆ ಸ್ಥಾನದಲ್ಲಿದೆ.
ಟ್ವೆಂಟಿ-20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಭಾರತದ ವಿರಾಟ್ ಕೊಹ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ(11ನೆ), ಸುರೇಶ್ ರೈನಾ(16ನೆ), ಯುವರಾಜ್ ಸಿಂಗ್(22ನೆ), ಧೋನಿ(43ನೆ) ಹಾಗೂ ಶಿಖರ್ ಧವನ್(48ನೆ) ಸ್ಥಾನದಲ್ಲಿದ್ದಾರೆ.
ವೆಸ್ಟ್‌ಇಂಡೀಸ್‌ನ ಸುನೀಲ್ ನರೇನ್ ಅನುಪಸ್ಥಿತಿಯಲ್ಲಿ 2ನೆ ರ್ಯಾಂಕ್‌ನಲ್ಲಿರುವ ಭಾರತದ ಆರ್. ಅಶ್ವಿನ್ ಟೂರ್ನಿಯಲ್ಲಿ ಅಗ್ರ ರ್ಯಾಂಕ್‌ನ ಬೌಲರ್ ಎನಿಸಿಕೊಂಡಿದ್ದಾರೆ.