ಅಭಿವ್ಯಕ್ತಿ ಸ್ವಾತಂತ್ರದ ದುರ್ಬಳಕೆ: ಧೋನಿ
ಢಾಕಾ, ಮಾ.7: ‘‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ದುರ್ಬಳಕೆಯಾಗುತ್ತಿದೆ’’ ಎಂದು ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ರವಿವಾರ ರಾತ್ರಿ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘‘ ಭಾರತದಲ್ಲಿ ಕ್ರಿಕೆಟ್ ಸೇರಿದಂತೆ ಪ್ರತಿಯೊಂದೂ ವಿಷಯಗಳಲ್ಲೂ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರವಿದೆ. ಈ ರೀತಿ ಆಡಬೇಕು. ಆ ರೀತಿ ಆಡಬೇಕು. ಈ ರೀತಿ ಮಾಡಬೇಕು. ಆ ರೀತಿ ಮಾಡಬೇಕು. ಆದರೆ ಕ್ರಿಕೆಟ್ ಆಡುವುದು ಜನರು ಭಾವಿಸಿರುವಂತೆ ಸುಲಭವಲ್ಲ. ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದು ಟಿವಿಯಲ್ಲಿ ಕ್ರಿಕೆಟ್ ನೋಡಿದಷ್ಟು ಸುಲಭವಲ್ಲ ’’ ಎಂದು ಧೋನಿ ಹೇಳಿದರು.
ಯಾರಾದರೂ ನನ್ನಲ್ಲಿ ನೀವು ಇಲ್ಲೇನು ಮಾಡಬೇಕೆಂದಿರುವಿರಿ ಎಂದು ಪ್ರಶ್ನಿಸಿದರೆ ‘‘ ಭಾರತದ ಪರ ಕ್ರಿಕೆಟ್ ಆಡುವುದು ಮೊದಲ ಆದ್ಯತೆ. ನಾನು ಯಾವತ್ತೂ ಇನ್ನೊಂದು ದೇಶದ ಪರ ಆಡಲಾರೆ ಎಂದು ಹೇಳುವೆ.ಇದಕ್ಕೂ ಸಾಕಷ್ಟು ಟೀಕೆ ಬರಬಹುದು ’’ ಎಂದು ಧೋನಿ ಹೇಳಿದರು.
‘‘ ನಿಮ್ಮನ್ನು ಯಾರಾದರೂ ಹೊಗಳಿದರೆ ಹಿಗ್ಗಬಾರದು. ಹಾಗೆಯೇ ತೆಗಳಿದರೆ ಕುಗ್ಗಬಾರದು. ಮಾಧ್ಯಮಗಳು ಯಾವತ್ತೂ ಸಂಯಮವನ್ನು ಪಾಲಿಸಬೇಕು. ನೀವು ಪ್ಯಾರಾಚೂಟ್‌ನಲ್ಲಿದ್ದರೆ ನೀವು ಕೆಳಗೆ ಬರುವುದನ್ನು ಸ್ವಲ್ಪ ಹೊತ್ತು ಮುಂದೂಡಬಹುದು. ಆದರೆ ಮತ್ತೆ ಮೇಲಕ್ಕೇರಬೇಕಾದರೆ ಕೆಳಕ್ಕೆ ಬರಬೇಕಾಗಿರುವುದು ಅನಿವಾರ್ಯ ’’ ಎಂದು ಧೋನಿ ನುಡಿದರು.
ಭಾರತದ ವಿರುದ್ಧ ಏಕದಿನ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾ ಸೋತ ನಂತರ ಉಭಯ ರಾಷ್ಟ್ರಗಳ ಜನರು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ನೀವು ಗೆಲ್ಲದಿದ್ದರೂ ಏನು ಆಗುವುದಿಲ್ಲ. ಬಾಂಗ್ಲಾದೇಶ ವಿರುದ್ಧ ಸೋಲು ಅನುಭವಿಸಿದರೆ ‘ನೀವು ಬಾಂಗ್ಲಾದೇಶದ ವಿರುದ್ಧ ಸೋತಿದ್ದೀರಿ’ ಎನ್ನುತ್ತಾರೆ. ಒಂದು ವೇಳೆ ಗೆದ್ದರೆ ‘ ನೀವು ಗೆದ್ದಿದ್ದೀರಿ’ ಅಷ್ಟೇ ಎನ್ನುತ್ತಾರೆ. ಏನಾದರೂ ಆಗಲಿ ಗೆದ್ದರೆ ನಾವು ಮನೆಗೆ ಏನನ್ನ್ನೂ ಕೊಂಡು ಹೋಗುವುದಿಲ್ಲ ’’ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.