×
Ad

ಭಾರತಕ್ಕೆ ಪಾಕಿಸ್ತಾನದ ಭದ್ರತಾ ತಂಡ ಆಗಮನ

Update: 2016-03-07 23:52 IST

ಅಮೃತಸರ, ಮಾ.7: ಭಾರತ ಹಾಗೂ ಪಾಕಿಸ್ತಾನದ ನಡುವೆ ಮಾ.19 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಪಾಕಿಸ್ತಾನದ ಇಬ್ಬರು ಸದಸ್ಯರನ್ನು ಒಳಗೊಂಡ ಭದ್ರತಾ ತಂಡ ಭಾರತಕ್ಕೆ ಸೋಮವಾರ ಆಗಮಿಸಿದೆ.

ಫೆಡರಲ್ ತನಿಖಾ ಸಂಸ್ಥೆ ಲಾಹೋರ್‌ನ ನಿರ್ದೇಶಕ ಡಾ. ಉಸ್ಮಾನ್ ಅನ್ವರ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಭದ್ರತಾ ಅಧಿಕಾರಿ ಕರ್ನಲ್(ನಿವೃತ್ತ) ಆಝಂ ಖಾನ್ ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಿದ್ದು ಧರ್ಮಶಾಲಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಪಾಕಿಸ್ತಾನ ಮಾ.16 ರಂದು ಅರ್ಹತಾ ಸುತ್ತಿನ ಪಂದ್ಯವನ್ನು ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ಮಾ.19 ರಂದು ಭಾರತ ವಿರುದ್ಧ ಎರಡನೆ ಪಂದ್ಯ ಆಡಲಿದೆೆ.

ಹಿಮಾಚಲ ಪ್ರದೇಶದಲ್ಲಿ ಮಾಜಿ ಸೈನಿಕರು ಭಾರತ-ಪಾಕ್ ವಿಶ್ವಕಪ್ ಆಯೋಜನೆಯನ್ನು ವಿರೋಧಿಸುತ್ತಿದ್ದು, ಎಚ್.ಪಿ. ಮುಖ್ಯ ಮಂತ್ರಿ ವೀರಭದ್ರ ಸಿಂಗ್ ಸೈನಿಕರ ಪ್ರತಿಭಟನೆಗೆ ಗೌರವ ನೀಡುವ ಮೂಲಕ ಪಂದ್ಯವನ್ನು ಧರ್ಮಶಾಲಾದಿಂದ ಬೇರೆಡೆಗೆ ವರ್ಗಾಯಿಸುವಂತೆ ಕೇಂದ್ರವನ್ನು ಕೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡೋ-ಪಾಕ್ ವಿಶ್ವಕಪ್ ಪಂದ್ಯ ಡೋಲಾಯಮಾನವಾಗಿದೆ.

ಪಾಕ್‌ನ ಭದ್ರತಾ ತಂಡ ಭಾರತದ ಹಿರಿಯ ಭದ್ರತಾ ಅಧಿಕಾರಿಗಳನ್ನು ಭೇಟಿಯಾಗಲಿದ್ದು, ಪಾಕ್ ಆಟಗಾರರ ವಸತಿ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ. ಪಾಕ್ ಕ್ರಿಕೆಟ್ ತಂಡ ಭಾರತಕ್ಕೆ ಭೇಟಿ ನೀಡುವಂತಹ ಪರಿಸ್ಥಿತಿಯಿದೆಯೇ ಎಂಬ ಬಗ್ಗೆಯೂ ತಂಡ ಪರಿಶೀಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News