×
Ad

ಹಾಂಕಾಂಗ್‌ಗೆ ಸೋಲುಣಿಸಿದ ಝಿಂಬಾಬ್ವೆ

Update: 2016-03-08 23:45 IST

ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೊದಲ ಸುತ್ತಿನ ಪಂದ್ಯ:ಸಿಬಾಂಡ ಚೊಚ್ಚಲ ಅರ್ಧಶತಕ

 ನಾಗ್ಪುರ, ಮಾ.8: ಆರನೆ ಆವೃತ್ತಿಯ ಐಸಿಸಿ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್‌ನ ಮೊದಲ ಸುತ್ತಿನ ಮೊದಲ ಪಂದ್ಯದಲ್ಲಿ ಝಿಂಬಾಬ್ವೆ ತಂಡ ಹಾಂಕಾಂಗ್ ತಂಡವನ್ನು 14 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಪ್ರಧಾನ ಸುತ್ತಿಗೆ ಹತ್ತಿರವಾಗಿದೆ.

 ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಹಾಂಕಾಂಗ್ ತಂಡ ಝಿಂಬಾಬ್ವೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಝಿಂಬಾಬ್ವೆ ತಂಡ ಆರಂಭಿಕ ದಾಂಡಿಗ ವಿಸಿ ಸಿಬಾಂಡ(59 ರನ್, 46 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಚಿಗುಂಬುರ(ಔಟಾಗದೆ 30 ರನ್, 13 ಎಸೆತ, 3 ಸಿಕ್ಸರ್) ಕೊಡುಗೆಯ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿತು. ಸಿಬಾಂಡ ಚೊಚ್ಚಲ ಅರ್ಧಶತಕ ಬಾರಿಸಿದರು.

ಗೆಲ್ಲಲು ಕಠಿಣ ಸವಾಲು ಪಡೆದ ಹಾಂಕಾಂಗ್ ತಂಡ ಆರಂಭಿಕ ದಾಂಡಿಗ ಜಮ್ಮಿ ಅಟ್‌ಕಿನ್ಸನ್ ಜೀವನಶ್ರೇಷ್ಠ ಬ್ಯಾಟಿಂಗ್ (53 ರನ್, 44 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ತನ್ವೀರ್ ಅಫ್ಝಲ್(ಔಟಾಗದೆ 31, 17 ಎಸೆತ, 3 ಬೌಂಡರಿ, 1 ಸಿಕ್ಸರ್) ಹೋರಾಟದ ಹೊರತಾಗಿಯೂ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿ ಸೋಲೊಪ್ಪಿಕೊಂಡಿತು.

 ತಲಾ ಎರಡು ವಿಕೆಟ್ ಪಡೆದ ಝಿಂಬಾಬ್ವೆಯ ಟಿರಿಪಾನೊ(2-27), ಚಟಾರ(2-28) ಹಾಂಕಾಂಗ್‌ನ್ನು 144 ರನ್‌ಗೆ ನಿಯಂತ್ರಿಸಿದರು. ಮಸಕಝ(1-30) ಹಾಗೂ ಸಿಕಂದರ್ ರಝಾ(1-10) ತಲಾ ಒಂದು ವಿಕೆಟ್ ಕಬಳಿಸಿದರು.

ಝಿಂಬಾಬ್ವೆಯ ಮೂವರು ಆಟಗಾರರು ರನೌಟಾಗಿದ್ದರೂ ಉತ್ತಮ ಸ್ಕೋರ್ ದಾಖಲಿಸಲು ನೆರವಾಗಿದ್ದ ಸಿಬಾಂಡ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

44 ವರ್ಷದ ಹಾಂಕಾಂಗ್‌ನ ಆರಂಭಿಕ ದಾಂಡಿಗ ಕ್ಯಾಂಪ್‌ಬೆಲ್ ಚೊಚ್ಚಲ ಟ್ವೆಂಟಿ-20 ಪಂದ್ಯವನ್ನು ಆಡಿದ ವಿಶ್ವದ ಹಿರಿಯ ಆಟಗಾರ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಝಿಂಬಾಬ್ವೆ: 20 ಓವರ್‌ಗಳಲ್ಲಿ 158/8

(ಸಿಬಾಂಡ 59, ಚಿಗುಂಬುರ ಔಟಾಗದೆ 30, ವಾಲ್ಲರ್ 26, ಮಸಕಝ 20, ತನ್ವೀರ್ ಅಫ್ಝಲ್ 2-19, ಎಜಾಝ್ ಖಾನ್ 2-33)

ಹಾಂಕಾಂಗ್: 20 ಓವರ್‌ಗಳಲ್ಲಿ 144/6

(ಜೆ. ಅಟ್‌ಕಿನ್ಸನ್ 53, ತನ್ವೀರ್ ಅಫ್ಝಲ್ ಔಟಾಗದೆ 31, ಚಾಪ್ಮನ್ 19, ಅಂಶುಮಾನ್ ರಾತ್ 13, ತಿರಿಪಾನೊ 2-27, ಚಟಾರ 2-28, ರಝಾ 1-10)

ಪಂದ್ಯಶ್ರೇಷ್ಠ: ಸಿಬಾಂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News