×
Ad

ವಿಶ್ವಕಪ್: ಐರ್ಲೆಂಡ್‌ಗೆ ಒಮನ್ ಶಾಕ್

Update: 2016-03-09 23:56 IST

ಧರ್ಮಶಾಲಾ, ಮಾ.9: ಝೀಶನ್ ಮಕ್ಸೂದ್(38) ಹಾಗೂ ಖಾವರ್ ಅಲಿ(34) ಮೊದಲ ವಿಕೆಟ್‌ಗೆ ಸೇರಿಸಿದ 69 ರನ್ ಹಾಗೂ ಕೆಳ ಕ್ರಮಾಂಕದಲ್ಲಿ ಆಮಿರ್ ಅಲಿ(32) ಸಾಹಸದ ನೆರವಿನಿಂದ ಒಮನ್ ತಂಡ ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 2 ವಿಕೆಟ್ ಅಂತರದಿಂದ ಸೋಲಿಸಿ ಶಾಕ್ ನೀಡಿದೆ.

ಬುಧವಾರ ಇಲ್ಲಿ ನಡೆದ ವಿಶ್ವಕಪ್‌ನ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡ ವಿಲ್ಸನ್(38), ಸ್ಟಿರ್ಲಿಂಗ್(29) ಹಾಗೂ ಪೋರ್ಟರ್‌ಫೀಲ್ಡ್(29)ಕಾಣಿಕೆಯ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು.

ಗೆಲ್ಲಲು ಸವಾಲಿನ ಮೊತ್ತ ಪಡೆದ ಒಮನ್ ತಂಡ ಕೇವಲ 2 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ಶಾಕ್ ನೀಡುವ ಐರ್ಲೆಂಡ್‌ಗೆ ಒಮನ್ ಶಾಕ್ ನೀಡಿ ಗಮನ ಸೆಳೆದಿದೆ.

ಮಕ್ಸೂದ್ ಹಾಗೂ ಅಲಿ ಒಮನ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ಈ ಇಬ್ಬರು ಔಟಾದ ನಂತರ ಒಮನ್ ಕುಸಿತದ ಹಾದಿ ಹಿಡಿದಿತ್ತು.

ಆಗ ಜತೀಂದರ್ ಸಿಂಗ್(24) ಅವರೊಂದಿಗೆ 6ನೆ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದ ಆಮಿರ್ ಅಲಿ(32 ರನ್, 17 ಎಸೆತ) ಒಮನ್‌ಗೆ ಅನಿರೀಕ್ಷಿತ ಗೆಲುವು ತಂದುಕೊಟ್ಟರು.

ಐರ್ಲೆಂಡ್ ಪರ ಕೆ.ಜಿ. ಒಬ್ರಿಯನ್(2-25), ಮೆಕ್‌ಬ್ರೈನ್(2-15) ಹಾಗೂ ಸೊರೆನ್ಸನ್(2-29) ತಲಾ 2 ವಿಕೆಟ್ ಕಬಳಿಸಿದರು.

ಒಮನ್ ಗೆಲುವಿನ ರೂವಾರಿ ಆಮಿರ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News