ವರ್ಷದ ಹಾಕಿ ಆಟಗಾರ ಪ್ರಶಸ್ತಿ: ಶ್ರೀಜೇಶ್ ಸಹಿತ ನಾಲ್ವರು ನಾಮನಿರ್ದೇಶನ
Update: 2016-03-10 23:35 IST
ಹೊಸದಿಲ್ಲಿ, ಮಾ.10: ಭಾರತದ ನಾಲ್ವರು ಹಾಕಿ ಆಟಗಾರರಾದ ಬೀರೇಂದ್ರ ಲಾಕ್ರಾ, ಆಕಾಶ್ ದೀಪ್ ಸಿಂಗ್, ಪಿ.ಆರ್.ಶ್ರೀಜೇಶ್ ಹಾಗೂ ಮನ್‌ಪ್ರೀತ್ ಸಿಂಗ್ ಪುರುಷರ ‘ವರ್ಷದ ಆಟಗಾರ ಪ್ರಶಸ್ತಿ’ಗೆ ನಾಮನಿರ್ದೇಶನಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾ.26 ರಂದು ದ್ವಿತೀಯ ವರ್ಷದ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದ್ದು, ಗುರುವಾರ ಹಾಕಿ ಇಂಡಿಯಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ವರ್ಷದ ಪ್ರಶಸ್ತಿ ಸಮಾರಂಭಕ್ಕೆ ಒಟ್ಟು 2 ಕೋಟಿ ರೂ. ಬಹುಮಾನ ಮೊತ್ತ ವನ್ನು ಹಾಕಿ ಇಂಡಿಯಾ ನಿಗದಿಪಡಿಸಿದೆ. ಪುರುಷರ ಹಾಗೂ ಮಹಿಳೆಯರ ವಿಭಾಗದ ವರ್ಷದ ಆಟಗಾರ ಪ್ರಶಸ್ತಿಗೆ ತಲಾ 25 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.
ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನಾ ಪ್ರಶಸ್ತಿಗೆ 30 ಲಕ್ಷ ರೂ.ಹಾಗೂ ಟ್ರೋಫಿ, ಉದಯೋನ್ಮುಖ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗೆ, ಶ್ರೇಷ್ಠ ಅಂಡರ್-21 ಆಟಗಾರರಿಗೆ ತಲಾ 10 ಲಕ್ಷ ರೂ. ಹಾಗೂ ಟ್ರೋಫಿಯನ್ನು ನೀಡಲಾಗುತ್ತದೆ