ಅಭ್ಯಾಸ ಪಂದ್ಯ: ಭಾರತಕ್ಕೆ ಇಂದು ದಕ್ಷಿಣ ಆಫ್ರಿಕ ಎದುರಾಳಿ
ಮುಂಬೈ, ಮಾ.11: ‘ಪ್ರಶಸ್ತಿ ಫೇವರಿಟ್’ ಭಾರತ ತಂಡ ಶನಿವಾರ ಇಲ್ಲಿ ನಡೆಯಲಿರುವ ಅಂತಿಮ ಟ್ವೆಂಟಿ-20 ಅಭ್ಯಾಸ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕದ ಸವಾಲನ್ನು ಎದುರಿಸಲಿದೆ. ಮಾ.15 ರಂದು ಆರಂಭವಾಗಲಿರುವ ಪ್ರಧಾನ ಸುತ್ತಿನ ಪಂದ್ಯಕ್ಕೆ ಮೊದಲು ಆತಿಥೇಯರಿಗೆ ಈ ಪಂದ್ಯ ಒಂದು ಕಠಿಣ ಪರೀಕ್ಷೆಯಾಗಿದೆ.
ಭಾರತ ಇತ್ತೀಚೆಗಿನ ದಿನಗಳಲ್ಲಿ ಚುಟುಕು ಮಾದರಿಯ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದು, ಕಳೆದ 11 ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿದೆ. ಇದರಲ್ಲಿ 50 ಓವರ್‌ಗಳ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ವಿರುದ್ಧ 3-0 ಅಂತರದ ವೈಟ್‌ವಾಶ್ ಕೂಡ ಸೇರಿದೆ.
ಬಾಂಗ್ಲಾದೇಶ ವಿರುದ್ಧದ ಫೈನಲ್ ಪಂದ್ಯವೂ ಸೇರಿದಂತೆ ಢಾಕಾದಲ್ಲಿ ಭಾರತ ಸತತ ಐದು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ ಟ್ವೆಂಟಿ-20 ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ್ದಲ್ಲದೆ ಆತ್ಮವಿಶ್ವಾಸವನ್ನೂ ವೃದ್ದಿಸಿಕೊಂಡಿದೆ.
ತವರು ಮೈದಾನದಲ್ಲಿ ಆಡುತ್ತಿರುವ ಧೋನಿ ಪಡೆ ಸ್ಪರ್ಧೆಯಲ್ಲಿರುವ ಎಲ್ಲ ತಂಡಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದು ಶತಸಿದ್ಧ.
ಭಾರತಕ್ಕೆ ದಕ್ಷಿಣ ಆಫ್ರಿಕ ವಿರುದ್ಧದ ಅಭ್ಯಾಸ ಪಂದ್ಯ ಅತ್ಯಂತ ಮುಖ್ಯವಾಗಿದೆ. ಭಾರತ ಈ ಹಿಂದೆ ಸ್ವದೇಶದಲ್ಲಿ ನಡೆದ ಟ್ವೆಂಟಿ-20 ಸರಣಿಯಲ್ಲಿ ಆಫ್ರಿಕದ ವಿರುದ್ಧ 0-2 ಅಂತರದಿಂದ ಸೋತಿತ್ತು.
ಹರಿಣ ಪಡೆಯ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಭರ್ಜರಿ ಫಾರ್ಮ್ ಹಾಗೂ ರೋಹಿತ್ ಶರ್ಮ ಸ್ಥಿರ ಪ್ರದರ್ಶನ ನೆರವಿಗೆ ಬರಲಿದೆ. ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಮುಹಮ್ಮದ್ ಶಮಿ ದೀರ್ಘ ಸಮಯದ ನಂತರ ತಂಡಕ್ಕೆ ವಾಪಸಾಗಿದ್ದರು.
ಹಿರಿಯ ಆಟಗಾರ ಆಶೀಷ್ ನೆಹ್ರಾ ಹಾಗೂ ಜಸ್ಪ್ರೀತ್ ಬುಮ್ರಾ ಹೊಸ ಚೆಂಡಿನೊಂದಿಗೆ ದಾಳಿ ನಡೆಸುತ್ತಿದ್ದಾರೆ. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್‌ಗಳಾದ ರವೀಂದ್ರಜಡೇಜ ಹಾಗೂ ಪವನ್ ನೇಗಿ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೆಲವು ವಿಕೆಟ್‌ಗಳನ್ನು ಕಬಳಿಸಿದ್ದರು.
ಎಫ್‌ಡು ಪ್ಲೆಸಿಸ್, ಎಬಿಡಿವಿಲಿಯರ್ಸ್, ಹಾಶಿಮ್ ಅಮ್ಲ, ಡೇವಿಡ್ ಮಿಲ್ಲರ್, ಹಾಗೂ ಕ್ವಿಂಟನ್ ಡಿಕಾಕ್ ರಂತಹ ಆಟಗಾರರ ಉಪಸ್ಥಿತಿಯಲ್ಲಿ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ದಕ್ಷಿಣ ಆಫ್ರಿಕ ಈ ತನಕ ಐಸಿಸಿ ವಿಶ್ವಕಪ್‌ನ್ನು ಜಯಿಸಿಲ್ಲ.
ಟೂರ್ನಿಯಲ್ಲಿ ಫೈನಲ್ ತಲುಪಲೂ ಸಫಲವಾಗಿಲ್ಲ. ಆಫ್ರಿಕ ಪಾಳಯದಲ್ಲಿ ಆಲ್‌ರೌಂಡರ್‌ಗಳಾದ ಕ್ರಿಸ್ ಮೊರಿಸ್, ಜೆಪಿ ಡುಮಿನಿ ಹಾಗೂ ಡೇವಿಡ್ ವೈಸ್ ಅವರಿದ್ದಾರೆ.
ವಿಶ್ವದ ಶ್ರೇಷ್ಠ ವೇಗದ ಬೌಲರ್ ಡೇಲ್ ಸ್ಟೇಯ್ನಾ ಅವರು ಕಾಗಿಸೊ ರಬಾಡ, ಕೈಲ್ ಅಬಾಟ್ ಹಾಗೂ ಕ್ರಿಸ್ ಮೊರಿಸ್ ಜೊತೆಗೂಡಿ ವೇಗದ ದಾಳಿಯ ನೇತೃತ್ವವಹಿಸಿದ್ದಾರೆ.
ಪಾಕಿಸ್ತಾನದ ಸಂಜಾತ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಹಾಗೂ ಎಡಗೈ ಸ್ಪಿನ್ನರ್ ಆ್ಯರೊನ್ ಫಾಂಗಿಸೊ ಆಫ್ರಿಕ ತಂಡಕ್ಕೆ ಸಮತೋಲನ ತಂದಿದ್ದಾರೆ.
ತಂಡಗಳು: ಭಾರತ: ಎಂ.ಎಸ್. ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್.ಅಶ್ವಿನ್, ಜಸ್‌ಪ್ರಿತ್ ಬುಮ್ರಾ, ಆಶೀಷ್ ನೆಹ್ರಾ, ಹರ್ಭಜನ್ ಸಿಂಗ್, ಪವನ್ ನೇಗಿ, ಅಜಿಂಕ್ಯ ರಹಾನೆ, ಮುಹಮ್ಮದ್ ಶಮಿ.
ದಕ್ಷಿಣ ಆಫ್ರಿಕ: ಎಫ್‌ಡು ಪ್ಲೆಸಿಸ್(ನಾಯಕ), ಕೈಲ್ ಅಬಾಟ್, ಹಾಶಿಮ್ ಅಮ್ಲ, ಫರ್ಹಾನ್ ಬೆಹಾರ್ದಿನ್, ಕ್ವಿಂಟನ್ ಡಿ ಕಾಕ್, ಎಬಿಡಿ ವಿಲಿಯರ್ಸ್, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಆ್ಯರೊನ್ ಫಾಂಗಿಸೊ, ಕಾಗಿಸೊ ರಬಾಡ, ರಿಲೀ ರೌಸ್ಸೌ, ಡೇಲ್ ಸ್ಟೇಯ್ನೌ, ಇಮ್ರಾನ್ ತಾಹಿರ್, ಡೇವಿಡ್ ವೈಸ್.
ಪಂದ್ಯದ ಸಮಯ: ರಾತ್ರಿ 7:30