ವಿಶ್ವಕಪ್: ಹಾಲೆಂಡ್ ತಂಡದ ಸವಾಲು ಅಂತ್ಯ
ಒಮನ್ ವಿರುದ್ಧದ ಪಂದ್ಯ ಮಳೆಗಾಹುತಿ
ಧರ್ಮಶಾಲಾ, ಮಾ.11: ಒಮನ್ ವಿರುದ್ಧ ಶುಕ್ರವಾರ ನಡೆಯಬೇಕಾಗಿದ್ದ ತನ್ನ ಎರಡನೆ ಅರ್ಹತಾ ಸುತ್ತಿನ ಪಂದ್ಯ ರದ್ದಾಗಿರುವ ಕಾರಣ ಹಾಲೆಂಡ್ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದೆ.
ಟಾಸ್ ಜಯಿಸಿದ ಒಮನ್ ತಂಡ ಹಾಲೆಂಡ್‌ನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಆದರೆ, ಭಾರೀ ಮಳೆಯಿಂದಾಗಿ ಎಚ್‌ಪಿಸಿಎ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದೆ.
ಹಾಲೆಂಡ್ ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತಿತ್ತು. ಮತ್ತೊಂದಡೆ, ದೈತ್ಯ ಸಂಹಾರಿ ಖ್ಯಾತಿಯ ಐರ್ಲೆಂಡ್ ತಂಡವನ್ನು ಮಣಿಸಿದ್ದ ಒಮನ್ ತಂಡಕ್ಕೆ ಪ್ರಧಾನ ಸುತ್ತಿಗೇರುವ ಸ್ಪರ್ಧೆಯಲ್ಲಿದೆ.
ಒಮನ್ 2 ಪಂದ್ಯಗಳಲ್ಲಿ 3 ಅಂಕವನ್ನು ಗಳಿಸಿದೆ. ಪಂದ್ಯ ಮಳೆಗಾಹುತಿಯಾದ ಕಾರಣ ಒಮನ್-ಹಾಲೆಂಡ್ ತಲಾ ಒಂದು ಅಂಕವನ್ನು ಹಂಚಿಕೊಂಡಿವೆ.
ಧರ್ಮಶಾಲಾದಲ್ಲಿ ಕಳೆದ ರಾತ್ರಿಯಿಂದ ಆರಂಭವಾಗಿದ್ದ ಮಳೆ ಬೆಳಗ್ಗೆಯೂ ಮುಂದುವರಿದಿತ್ತು. ಮಧ್ಯಾಹ್ನ 2.45ಕ್ಕೆ ಮಳೆ ವಿರಾಮ ಪಡೆದಿತ್ತು. ಆಗ ಟಾಸ್ ಹಾರಿಸಲಾಗಿತ್ತು. ಟಾಸ್ ಜಯಿಸಿದ್ದ ಒಮನ್ ನಾಯಕ ಸುಲ್ತಾನ್ ಅಹ್ಮದ್ ಬೌಲಿಂಗ್ ಆಯ್ದುಕೊಂಡಿದ್ದರು.
ಉಭಯ ತಂಡದ ಆಟಗಾರರು ಮೈದಾನಕ್ಕೆ ಇಳಿದ ತಕ್ಷಣ ಮತ್ತೊಮ್ಮೆ ಮಳೆ ಆಗಮಿಸಿತು. ಮಳೆಯ ಕಾರಣ ಪಿಚ್ ಮೇಲೆ ಹೊದಿಕೆ ಹಾಸಲಾಯಿತು.
ವಿಶ್ವಕಪ್‌ನಲ್ಲಿ ಹಾಲೆಂಡ್‌ನ ಅಭಿಮಾನ ಅಂತ್ಯವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ನಾಯಕ ಪೀಟರ್ ಬೊರೆನ್, ‘‘ಬಾಂಗ್ಲಾದೇಶ ವಿರುದ್ಧ ವೀರೋಚಿತ ಸೋಲು ಕಂಡ ನಂತರ ಈ ರೀತಿಯಲ್ಲಿ ವಿಶ್ವಕಪ್‌ಗೆ ಅಂತ್ಯ ಹಾಡಿರುವುದು ಬೇಸರ ತಂದಿದೆ. ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ನಾವು ಹೋರಾಟ ನೀಡಿದ್ದೆವು. ಈ ಹಂತದಲ್ಲಿ ನಮಗೆ ಹೆಚ್ಚು ಅವಕಾಶ ಲಭಿಸಿರಲಿಲ್ಲ. ಇನ್ನು ನಮಗೆ ಮತ್ತೊಮ್ಮೆ ಅವಕಾಶ ಸಿಗಬೇಕಾದರೆ 4 ವರ್ಷ ಕಾಯಬೇಕು’’ ಎಂದು ಹೇಳಿದ್ದಾರೆ.
ಬಾಂಗ್ಲಾ-ಐರ್ಲೆಂಡ್ ಪಂದ್ಯವೂ ಮಳೆಗಾಹುತಿ
ಧರ್ಮಶಾಲಾ, ಮಾ.11: ಬಾಂಗ್ಲಾದೇಶ- ಐರ್ಲೆಂಡ್ ನಡುವಿನ ವಿಶ್ವಕಪ್‌ನ ‘ಎ’ ಗುಂಪಿನ 8ನೆ ಪಂದ್ಯವೂ ಮಳೆಗಾಹುತಿಯಾಗಿದೆ. ಶುಕ್ರವಾರ ಮಳೆಯಿಂದಾಗಿ ಪಂದ್ಯ ರದ್ದಾಗುವ ಮೊದಲು ಬಾಂಗ್ಲಾದೇಶ 8 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 94 ರನ್ ಗಳಿಸಿತ್ತು.
ತಮೀಮ್ ಇಕ್ಬಾಲ್(47), ಸೌಮ್ಯ ಸರ್ಕಾರ್(20) ಹಾಗೂ ಶಬೀರ್‌ರಹ್ಮಾನ್(13) ಎರಂಡಕೆಯ ಸ್ಕೋರ್ ದಾಖಲಿಸಿದರು.