ಎ.9 ರಿಂದ ಒಂಬತ್ತನೆ ಆವೃತ್ತಿಯ ಐಪಿಎಲ್ ಆರಂಭ
ಮುಂಬೈ, ಮಾ.11: ಒಂಬತ್ತನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮುಂಬೈನಲ್ಲಿ ಎ.9 ರಿಂದ ಆರಂಭವಾಗಲಿದ್ದು, ಮೇ 29ಕ್ಕೆ ಮುಂಬೈನಲ್ಲೇ ಫೈನಲ್ ಪಂದ್ಯ ನಡೆಯಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್‌ನಿಂದ ಎರಡು ವರ್ಷ ಅಮಾತುಗೊಂಡಿರುವ ಕಾರಣ ಚೆನ್ನೈ ಹಾಗೂ ಜೈಪುರದ ಕ್ರಿಕೆಟ್ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಟ್ವೆಂಟಿ-20 ಟೂರ್ನಿಯಾಗಿರುವ ಐಪಿಎಲ್‌ನಲ್ಲಿ ಈ ವರ್ಷ ಪುಣೆ ಹಾಗೂ ರಾಜ್‌ಕೋಟ್ ತಂಡಗಳು ಸೇರ್ಪಡೆಯಾಗಿವೆ.
ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಎಂ.ಎಸ್ ಧೋನಿ ಮುನ್ನಡೆಸಲಿದ್ದಾರೆ. ರಾಜ್‌ಕೋಟ್ ಮೂಲದ ಗುಜರಾತ್ ಲಯನ್ಸ್ ತಂಡಕ್ಕೆ ಚೆನ್ನೈನ ಮಾಜಿ ಆಟಗಾರ ಸುರೇಶ್ ರೈನಾ ಸಾರಥ್ಯವಹಿಸಿಕೊಂಡಿದ್ದಾರೆ.
2016ರ ಐಪಿಎಲ್ ಟೂರ್ನಮೆಂಟ್ 51 ದಿನಗಳ ಕಾಲ ನಡೆಯಲಿದ್ದು, 4 ಪ್ಲೇ-ಆಫ್ ಪಂದ್ಯಗಳು ಸೇರಿದಂತೆ ಒಟ್ಟು 60 ಪಂದ್ಯಗಳು ನಡೆಯುತ್ತವೆ.
ರಾಯಿಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ ಡೆಲ್ಲಿ ಡೇರ್ ಡೆವಿಲ್ಸ್‌ನ ಎರಡು ತವರು ಪಂದ್ಯದ ಆತಿಥ್ಯವಹಿಸಲಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೂರು ತವರು ಪಂದ್ಯಗಳು ನಡೆಯುತ್ತವೆ.