ಬಾಕ್ಸಿಂಗ್: ಅಲೆಕ್ಸಾಂಡರ್‌ಗೆ ವಿಜೇಂದರ್ ಪಂಚ್
ಹರ್ಯಾಣದ ಬಾಕ್ಸರ್‌ಗೆ ಸತತ 4ನೆ ಜಯ
ಲಿವರ್‌ಪೂಲ್, ಮಾ.13: ಹಾವಿನ ರಕ್ತವನ್ನು ಕುಡಿದು ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ವಿರುದ್ಧ ಸ್ಪರ್ಧೆಗೆ ಧುಮುಕಿದ್ದ ಹಂಗೇರಿಯದ ಅಲೆಕ್ಸಾಂಡರ್ ಹಾರ್ವತ್ ಮೂರನೇ ಸುತ್ತಿನಲ್ಲಿ ಸೋತು ಹೊರ ನಡೆದಿದ್ದಾರೆ.
ವೃತ್ತಿಪರ ಬಾಕ್ಸರ್ ಆಗಿ ಪರಿವರ್ತನೆ ಆದ ನಂತರ ವಿಜೇಂದರ್‌ಗೆ ಇದು ಸತತ ನಾಲ್ಕನೆ ಗೆಲುವಾಗಿದೆ. ಶನಿವಾರ ತಡರಾತ್ರಿ ನಡೆದ 75ಕೆಜಿ ಮಿಡ್ಲ್‌ವೇಟ್ ವಿಭಾಗದ ಆರು ಸುತ್ತಿನ ಸ್ಪರ್ಧೆಯಲ್ಲಿ ವಿಜೇಂದರ್ ಮೂರನೆ ಸುತ್ತಿನಲ್ಲೇ ಅಲೆಕ್ಸಾಂಡರ್‌ರನ್ನು ಸುಲಭವಾಗಿ ಮಣಿಸಿದರು.
‘‘ಈ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಿದ್ದಕ್ಕೆ ಸಂತೋಷವಾಗುತ್ತಿದೆ. ಈ ವರ್ಷದ ಜೂನ್ 11 ರಂದು ಭಾರತದಲ್ಲಿ ನಡೆಯಲಿರುವ ಡಬ್ಲ್ಯುಬಿಒ ಏಷ್ಯಾ ಪ್ರಶಸ್ತಿ ಜಯಿಸಲು ಈ ಪಂದ್ಯ ಪೂರ್ವತಯಾರಿ ಎನಿಸಿಕೊಂಡಿದೆ. ನನ್ನ ತವರು ನಾಡಿನ ಪ್ರೇಕ್ಷಕರ ಮುಂದೆ ಏಷ್ಯಾ ಪ್ರಶಸ್ತಿ ಜಯಿಸುವುದು ನನ್ನ ಗುರಿ. ಭಾರತದಲ್ಲಿ ಆಡುವ ಮೊದಲು ಎಪ್ರಿಲ್‌ನಲ್ಲಿ ಇನ್ನೆರಡು ಪಂದ್ಯಗಳಲ್ಲಿ ಜಯ ಸಾಧಿಸುವುದನ್ನು ಎದುರು ನೋಡುತ್ತಿರುವೆನು’’ ಎಂದು 30ರ ಹರೆಯದ ವಿಜೇಂದರ್ ಪ್ರತಿಕ್ರಿಯಿಸಿದರು.
ಹಾವಿನ ರಕ್ತವನ್ನು ಕುಡಿದು ವಿಜೇಂದರ್ ವಿರುದ್ಧದ ಬಾಕ್ಸಿಂಗ್ ಸ್ಪರ್ಧೆಗೆ ತಯಾರಾಗಿದ್ದ 20ರ ಹರೆಯದ ಅಲೆಕ್ಸಾಂಡರ್‌ಗೆ ಈ ತನಕ ಏಳು ಪ್ರೊ ಫೈಟ್‌ಗಳಲ್ಲಿ ಆಡಿದ ಅನುಭವವಿದೆ. ಹಾವಿನ ರಕ್ತವನ್ನು ಕುಡಿದು ಬಾಕ್ಸಿಂಗ್ ರಿಂಗ್‌ಗೆ ಇಳಿದಿದ್ದ ಹಂಗೇರಿಯದ ಈ ಬಾಕ್ಸರ್‌ಗೆ ಭಾರತಕ್ಕೆ ಮೊದಲ ಬಾರಿ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಟ್ಟಿರುವ ವಿಜೇಂದರ್‌ರನ್ನು ಮಣಿಸಲು ಸಾಧ್ಯವಾಗಲಿಲ್ಲ. ಬಾಕ್ಸಿಂಗ್ ಅಖಾಡದಲ್ಲಿ ಅತ್ಯಂತ ವೇಗವಾಗಿ ಆಡಿದ ವಿಜೇಂದರ್ ಎರಡನೆ ಸುತ್ತಿನಲ್ಲೇ ಹಂಗೇರಿದ ಬಾಕ್ಸರ್‌ರನ್ನು ಮಣಿಸಲು ಯತ್ನಿಸಿದ್ದರು.
ಮೂರನೆ ಸುತ್ತು ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಲೆಕ್ಸಾಂಡರ್ ಸೋಲೊಪ್ಪಿಕೊಂಡರು. ವಿಜೇಂದರ್ ಸತತ ನಾಲ್ಕನೆ ಪಂದ್ಯದಲ್ಲಿ ಜಯ ದಾಖಲಿಸಿದರು. ವಿಜೇಂದರ್ ಎ.2 ರಂದು ಮುಂದಿನ ಪಂದ್ಯವನ್ನು ಆಡಲಿದ್ದಾರೆ. ಆದರೆ, ಎದುರಾಳಿ ಹಾಗೂ ಸ್ಥಳ ಯಾವುದೆಂದು ಇನ್ನೂ ನಿರ್ಧಾರವಾಗಿಲ್ಲ