×
Ad

ಭಾರತದ ಭದ್ರತೆ ಬಗ್ಗೆ ಅಫ್ರಿದಿ, ಮಲಿಕ್ ಶ್ಲಾಘನೆ

Update: 2016-03-13 23:12 IST

ಕೋಲ್ಕತಾ, ಮಾ.13: ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲು ಆಗಮಿಸಿರುವ ಪಾಕಿಸ್ತಾನ ತಂಡಕ್ಕೆ ಭಾರತದಲ್ಲಿ ಲಭಿಸಿರುವ ಭವ್ಯ ಸ್ವಾಗತದಿಂದ ಸಂತುಷ್ಟರಾಗಿರುವ ಪಾಕ್ ನಾಯಕ ಶಾಹಿದ್ ಅಫ್ರಿದಿ ಹಾಗೂ ಆಲ್‌ರೌಂಡರ್ ಶುಐಬ್ ಮಲಿಕ್ ಭಾರತದಲ್ಲಿ ಭದ್ರತೆಯ ಭೀತಿಯಿದೆ ಎಂದು ತಮಗನಿಸುತ್ತಿಲ್ಲ ಎಂದಿದ್ದಾರೆ.

ಪಾಕ್ ತಂಡ ಸುರಕ್ಷತೆಯ ಭೀತಿಯ ಹಿನ್ನಲೆಯಲ್ಲಿ ಭಾರತಕ್ಕೆ ವಿಳಂಬವಾಗಿ ಆಗಮಿಸಿತ್ತು. ತನ್ನ ಸರಕಾರದಿಂದ ಹಸಿರುನಿಶಾನೆ ಲಭಿಸಿದ ನಂತರ ಶನಿವಾರ ರಾತ್ರಿ ಕೋಲ್ಕತಾಕ್ಕೆ ಆಗಮಿಸಿತ್ತು.

 ‘‘ಭಾರತದಲ್ಲಿ ಆಡುವಾಗ ಆಗುವ ಸಂತೋಷ ವಿಶ್ವದ ಯಾವ ಭಾಗದಲ್ಲೂ ಆಗುವುದಿಲ್ಲ. ನಾನೀಗ ನಿವೃತ್ತಿಯ ಅಂಚಿನಲ್ಲಿದ್ದೇನೆ. ನನಗೆ ಭಾರತಕ್ಕೆ ಪ್ರವಾಸ ಕೈಗೊಳ್ಳುವುದೆಂದರೆ ತುಂಬಾ ಇಷ್ಟ. ಇಲ್ಲಿನ ನೆನಪುಗಳು ಸದಾ ಸ್ಮರಣೀಯ. ನನಗೆ ಪಾಕಿಸ್ತಾನಕ್ಕಿಂತ ಹೆಚ್ಚು ಪ್ರೀತಿ ಭಾರತದಲ್ಲಿ ಸಿಗುತ್ತಿದೆ. ಭಾರತದಲ್ಲಿ ಕ್ರಿಕೆಟ್‌ನ್ನು ಪ್ರೀತಿಸುವ ಜನರು ಪಾಕಿಸ್ತಾನಕ್ಕಿಂತ ಹೆಚ್ಚಿದ್ದಾರೆ. ನನ್ನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಭಾರತದಲ್ಲಿ ಆಡುವುದನ್ನು ತುಂಬಾ ಆನಂದಿಸಿದ್ದೇನೆ’’ಎಂದು ಅಫ್ರಿದಿ ಹೇಳಿದ್ದಾರೆ. ಅಫ್ರಿದಿ ಅಭಿಪ್ರಾಯಕ್ಕೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾರ ಪತಿ ಶುಐಬ್ ಮಲಿಕ್ ಧ್ವನಿಗೂಡಿಸಿದರು.

 ‘‘ನಾನು ಮೊದಲಿಗೆ ಭಾರತ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಇಲ್ಲಿ ನಮಗೆ ನೀಡಿರುವ ಭದ್ರತೆ ಉತ್ತಮವಾಗಿದೆ. ನನ್ನ ಪತ್ನಿ ಭಾರತದವರು. ನಾನು ಭಾರತಕ್ಕೆ ಹಲವಾರು ಬಾರಿ ಬಂದಿದ್ದೇನೆ. ನನಗೆ ಒಂದು ಬಾರಿಯೂ ಭದ್ರತೆಯ ಭೀತಿ ಎದುರಾಗಲಿಲ್ಲ’’ಎಂದು ಮಲಿಕ್ ಹೇಳಿದರು.

‘‘ನನಗೆ ಭಾರತ ಹಾಗೂ ಪಾಕಿಸ್ತಾನ ಜನರಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ನಾವು ಸೇವಿಸುವ ಆಹಾರ ಹಾಗೂ ಆಡುವ ಭಾಷೆ ಒಂದೇ. ಭಾರತದಲ್ಲಿ ಇರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇಲ್ಲಿನ ಜನರು ಹಾಗೂ ಮಾಧ್ಯಮಗಳು ನನಗೆ ತುಂಬಾ ಪ್ರೀತಿ ತೋರಿದ್ದಾರೆ. ಭಾರತದಲ್ಲಿ ಇರುವುದು ನನಗೊಂದು ಗೌರವವಾಗಿದೆ’’ಎಂದು ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News