×
Ad

ವಿಶ್ವಕಪ್: ಗೆಲುವಿನೊಂದಿಗೆ ಹಾಲೆಂಡ್ ವಿದಾಯ

Update: 2016-03-13 23:21 IST

ಮಳೆ ಬಾಧಿತ ಪಂದ್ಯದಲ್ಲಿ ಐರ್ಲೆಂಡ್‌ಗೆ 12 ರನ್ ಸೋಲು

ಧರ್ಮಶಾಲಾ, ಮಾ.13: ಮಳೆ ಬಾಧಿತ ಪಂದ್ಯದಲ್ಲಿ ಹಾಲೆಂಡ್ ತಂಡ ಐರ್ಲೆಂಡ್ ತಂಡವನ್ನು 12 ರನ್‌ಗಳಿಂದ ರೋಚಕವಾಗಿ ಮಣಿಸಿ ಟ್ವೆಂಟಿ-20 ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿದೆ.

ರವಿವಾರ ವಿಶ್ವಕಪ್‌ನ ಮೊದಲ ಸುತ್ತಿನ ಕೊನೆಯ ಪಂದ್ಯ ಮಳೆಯಿಂದಾಗಿ ವಿಳಂಬವಾಗಿ ಆರಂಭವಾಗಿದ್ದು, 6 ಓವರ್‌ಗೆ ಪಂದ್ಯವನ್ನು ನಿಗದಿಪಡಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಹಾಲೆಂಡ್ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತ್ತು.

1.3ನೆ ಓವರ್‌ನಲ್ಲಿ 19 ರನ್ ಕಲೆ ಹಾಕಿ ಉತ್ತಮ ಆರಂಭವನ್ನು ಪಡೆದಿದ್ದ ಐರ್ಲೆಂಡ್ ಅಂತಿಮವಾಗಿ 6 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 47 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಾಲ್ ವ್ಯಾನ್ ಮಿಕೆರೆನ್(4-11) ಹಾಗೂ ರಾಲ್ಫ್ ವ್ಯಾನ್ ಡೆರ್ ಮೆರ್ವ್(2-3) ಅಮೋಘ ಬೌಲಿಂಗ್ ಸಂಘಟಿಸಿ ಐರ್ಲೆಂಡ್‌ನ್ನು 47 ರನ್‌ಗೆ ನಿಯಂತ್ರಿಸಿದರು. ಒಂದು ಕಾಲದಲ್ಲಿ ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ನೀರು ಕುಡಿಸಿದ್ದ ಐರ್ಲೆಂಡ್ ಚುಟುಕು ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಆರಂಭಿಕ ದಾಂಡಿಗ ಪಾಲ್ ಸ್ಟಿರ್ಲಿಂಗ್ 15 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

ಕೇವಿನ್ ಒ’ಬ್ರಿಯಾನ್ ಸೇರಿದಂತೆ ಮೂವರು ಆಟಗಾರರು ಖಾತೆ ತೆರೆಯಲು ವಿಫಲರಾದರು. ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಹಾಲೆಂಡ್ ತಂಡ ಆರಂಭಿಕ ದಾಂಡಿಗ ಸ್ಟೀಫನ್ ಮೈಬರ್ಗ್(27ರನ್, 18 ಎಸೆತ, 5 ಬೌಂಡರಿ) ಹಾಗೂ ನಾಯಕ ಪೀಟರ್ ಬೋರೆನ್(14) ಎರಡಂಕೆಯ ಸ್ಕೋರ್ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತು. ಐರ್ಲೆಂಡ್‌ನ ಪರ ಜಾರ್ಜ್ ಡಾಕ್ರೆಲ್(3-7) 3 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಹಾಲೆಂಡ್: 6 ಓವರ್‌ಗಳಲ್ಲಿ 59/5

(ಸ್ಟೀಫನ್ ಮೈಬರ್ಗ್ 27, ಜಾರ್ಜ್ ಡಾಕ್ರೆಲ್ 3-7)

ಐರ್ಲೆಂಡ್: 6 ಓವರ್‌ಗಳಲ್ಲಿ 47/7

(ಸ್ಟಿರ್ಲಿಂಗ್ 15, ಮಿಕೆರೆನ್ 4-11, , ಮೆರ್ವ್ 2-3)

ಪಂದ್ಯಶ್ರೇಷ್ಠ: ಪಾಲ್ ವ್ಯಾನ್ ಮಿಕೆರೆನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News