ಭಾರತದ ಮಹಿಳಾ ಹಾಕಿ ತಂಡಕ್ಕೆ ಬಹುಮಾನ: ಹಾಕಿ ಇಂಡಿಯಾ ನಿರ್ಧಾರ
Update: 2016-03-13 23:25 IST
ಬೆಂಗಳೂರು, ಮಾ.13: ಭಾರತದ ಮಹಿಳಾ ಹಾಕಿ ತಂಡ ಹಾಗೂ ಸಹಾಯಕ ಸಿಬ್ಬಂದಿಗೆ ಬೆಂಗಳೂರಿನಲ್ಲಿ ಮಾ.26 ರಂದು ನಡೆಯಲಿರುವ ಹಾಕಿ ಇಂಡಿಯಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 1 ಲಕ್ಷ ರೂ. ನಗದು ನೀಡಿ ಗೌರವಿಸಲು ಹಾಕಿ ಇಂಡಿಯಾ ನಿರ್ಧರಿಸಿದೆ.
ಮಹಿಳಾ ತಂಡ ಸುಮಾರು 36 ವರ್ಷಗಳ ನಂತರ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆದು ಐತಿಹಾಸಿಕ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಒಂದು ಲಕ್ಷ ರೂ. ಬಹುಮಾನ ನೀಡಲು ನಿರ್ಧರಿಸಿದೆ.
ಭಾರತದ ಮಹಿಳಾ ಹಾಕಿ ತಂಡ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿತ್ತು.
ಭಾರತದ ಮಹಿಳಾ ತಂಡದಲ್ಲಿ ಹರ್ಯಾಣದ ಆಟಗಾರ್ತಿಯರ ಪ್ರಾಬಲ್ಯ ಹೆಚ್ಚಾಗಿದೆ. ಹರ್ಯಾಣದ ರಾಣಿ, ದೀಪಿಕಾ, ರೀತು ರಾಣಿ ಹಾಗೂ ಸವಿತಾ 2016ರ ಸಾಲಿನ ವರ್ಷದ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತೀಯ ಹಾಕಿಯ ಉನ್ನತ ಪ್ರಶಸ್ತಿಯು 25 ಲಕ್ಷ ರೂ. ನಗದು ಬಹುಮಾನ ಹೊಂದಿದೆ.