ಅಭ್ಯಾಸ ಪಂದ್ಯ; ಲಂಕಾ ವಿರುದ್ಧ ಪಾಕ್‌ಗೆ ರೋಚಕ ಜಯ
ಕೋಲ್ಕತಾ,ಮಾ.14: ಪಾಕಿಸ್ತಾನ ತಂಡ ಇಲ್ಲಿ ಸೋಮವಾರ ನಡೆದ ಟ್ವೆಂಟಿ-20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ 15 ರನ್‌ಗಳ ರೋಚಕ ಜಯ ಗಳಿಸಿದೆ.
ಈಡನ್ ಗಾರ್ಡರ್ನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತ್ತು.
ಗೆಲುವಿಗೆ 158 ರನ್ ಗಳಿಸಬೇಕಿದ್ದ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 142 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಾಕಿಸ್ತಾನ ತಂಡದ ಇಮಾದ್ ವಸೀಮ್ (25ಕ್ಕೆ 4), ಮುಹಮ್ಮದ್ ಇರ್ಫಾನ್(18ಕ್ಕೆ 2) ಹಾಗೂ ವಹಾಬ್ ರಿಯಾಝ್(35ಕ್ಕೆ 1) ಇವರ ದಾಳಿಯನ್ನು ಎದುರಿಸಲಾರದೆ ಲಂಕಾ ಕೊನೆಯ ಹಂತದಲ್ಲಿ ಮುಗ್ಗರಿಸಿತು.
ಶ್ರೀಲಂಕಾದ ಪರ ತಿರಿಮನ್ನೆ 45 ರನ್, ವಿಕೆಟ್ ಕೀಪರ್ ದಿನೇಶ್ ಚಾಂಡಿಮಾಲ್ 30 ರನ್, ಚಾಮರ ಕಪುಗೆಡೆರ 14 ರನ್, ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ 10 ರನ್, ದಸುನ್ ಶನಾಕ ಔಟಾಗದೆ 13 ರನ್, ಸೇನನಾಯಕೆ 10ರನ್ ಗಳಿಸಿದರು. ಪಾಕಿಸ್ತಾನ ತಂಡದ ಮುಹಮ್ಮದ್ ಹಫೀಝ್ ಔಟಾಗದೆ 70 ರನ್ (69ನಿ, 49 ಎಸೆತ, 9 ಬೌಂಡರಿ, 1ಸಿಕ್ಸರ್) ಗಳಿಸಿ ತಂಡದ ಸ್ಕೋರ್‌ನ್ನು 150ರ ಗಡಿ ದಾಟಿಸಲು ನೆರವಾಗಿದ್ದರು.
ಶಾರ್ಜಿಲ್ ಖಾನ್ ಔಟಾಗದೆ 23 ರನ್, ಅಹ್ಮದ್ ಶೆಹಝಾದ್ 23 ರನ್, ಸರ್ಫರಾಝ್ ಅಹ್ಮದ್ 13 ರನ್, ಉಮ್ಮರ್ ಅಕ್ಮಲ್ 19 ರನ್ ಗಳಿಸಿ ತಂಡಕ್ಕೆ ಸ್ಪರ್ಧಾತ್ಮಕ ಸವಾಲು ಸೇರಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 20 ಓವರ್‌ಗಳಲ್ಲಿ 157/5(ಹಫೀಝ್ 70, ಶಾರ್ಜಿಲ್ ಖಾನ್ 23; ಪೆರೆರಾ 21ಕ್ಕೆ 2).
ಶ್ರೀಲಂಕಾ 20 ಓವರ್‌ಗಳಲ್ಲಿ 142/9
(ತಿರಿಮನ್ನೆ 45, ಚಾಂಡಿಮಲ್ 30; ವಸೀಮ್ 25ಕ್ಕೆ 4).