ವಿಶ್ವದ ಅತಿದೊಡ್ಡ ಕೊಡೆ ಮಕ್ಕಾದ ಹರಮ್‌ನಲ್ಲಿ ಜೋಡಣೆ

Update: 2016-03-15 03:41 GMT

ಮಕ್ಕಾ, ಮಾ.15: ವಿಶ್ವದ ಅತಿದೊಡ್ಡ ಮಡಚಬಹುದಾದ ಕೊಡೆಯನ್ನು ಅಳವಡಿಸುವ ಕಾರ್ಯ ಉತ್ತರ ಕಂಟ್ರಿಯಾರ್ಡ್‌ನ ಮಕ್ಕಾದ ಪವಿತ್ರ ಮಸೀದಿಯಲ್ಲಿ ಆರಂಭವಾಗಿದೆ.

ಎಂಟು ಹೈಟೆಕ್ ದೈತ್ಯ ಕೊಡೆಗಳು ಹಾಗೂ 54 ಪುಟ್ಟ ಕೊಡೆಗಳನ್ನು ಮುಂದಿನ ಆರು ತಿಂಗಳಲ್ಲಿ ಅಳವಡಿಸುವ ಕಾರ್ಯಕ್ಕೆ ಇದೀಗ ಚಾಲನೆ ಸಿಕ್ಕಿದೆ.

ಜರ್ಮನಿಯಲ್ಲಿ ತಯಾರಾದ ಈ ದೈತ್ಯ ಕೊಡೆಗಳಲ್ಲಿ ಬೃಹತ್ ಗಡಿಯಾರ, ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸ್ಕ್ರೀನ್, ಹವಾನಿಯಂತ್ರಣ ಯಂತ್ರ ಹಾಗೂ ಕಣ್ಗಾವಲು ಕ್ಯಾಮೆರಾ ಇರುತ್ತದೆ. ಪ್ರತಿ ಕೊಡೆಗಳು 45 ಮೀಟರ್ ಎತ್ತರವಿದ್ದು, 16 ಟನ್ ತೂಕವಿದೆ. ಈ ಕೊಡೆ ತೆರೆದಾಗ 2400 ಚದರ ಮೀಟರ್ ಪ್ರದೇಶಕ್ಕೆ ನೆರಳು ನೀಡಲಿದೆ.


ಈ ಎಲೆಕ್ಟ್ರಾನಿಕ್ ಕಾರ್ಯಾಚರಣೆ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯದಲ್ಲಿ ಜರ್ಮನಿಯಿಂದ ಆಗಮಿಸಿದ 25 ಮಂದಿ ಎಂಜಿನಿಯರ್‌ಗಳು, ವಿಶೇಷ ತಂತ್ರಜ್ಞರು ಹಾಗೂ ಸುರಕ್ಷಾ ತಜ್ಞರು ಮೇಲುಸ್ತುವಾರಿ ವಹಿಸಿದ್ದಾರೆ. ಇದಕ್ಕೆ ಪೂರಕವಾಗಿ 54 ಸಣ್ಣ ಕೊಡೆಗಳನ್ನು ಈ ಪ್ರದೇಶದಲ್ಲಿ ಅಳವಡಿಸಲು ನಿರ್ಧರಿಸಲಾಗಿದ್ದು, ಒಟ್ಟು 19200 ಚದರ ಮೀಟರ್ ಪ್ರದೇಶಕ್ಕೆ ನೆರಳಿನ ವ್ಯವಸ್ಥೆಯಾಗಲಿದೆ. ಇದರ ಜತೆಗೆ ಆರಾಧಕರಿಗೆ ವಿಶ್ರಾಂತಿಗಾಗಿ 122 ಬೆಂಚುಗಳನ್ನು ಅಳವಡಿಸುವ ಹಾಗೂ ಸೇವಾ ಕೊಠಡಿಗಳನ್ನೂ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.


ಕಿಂಗ್ ಫಹ್ದ್ ವಿಸ್ತರಣಾ ಪ್ರದೇಶದಿಂದ ಕಿಂಗ್ ಅಬ್ದುಲ್ಲಾ ವಿಸ್ತರಣಾ ಪ್ರದೇಶದವರೆಗೆ ಹಬ್ಬಿರುವ ಇಡೀ ಉತ್ತರ ಪ್ಲಾಝಾಗೆ ನೆರಳಿನ ವ್ಯವಸ್ಥೆಯಾಗಲಿದೆ. ಇದು ಪೂರ್ಣಗೊಂಡ ಬಳಿಕ ಸುಮಾರು ನಾಲ್ಕು ಲಕ್ಷ ಯಾತ್ರಾರ್ಥಿಗಳಿಗೆ ಇಲ್ಲಿ ನೆರಳಿನ ವ್ಯವಸ್ಥೆಯಾದಂತಾಗುತ್ತದೆ.


ಈ ಎರಡು ಪವಿತ್ರ ಮಸೀದಿಗಳ ವ್ಯವಹಾರ ಹೊಣೆ ಹೊತ್ತಿರುವ ಜನರಲ್ ಪ್ರೆಸಿಡೆನ್ಸಿ, ಯೋಜನೆಯ ಮೇಲುಸ್ತುವಾರಿ ವಹಿಸಿದೆ. ಶಿಕ್ಷಣ ಸಚಿವಾಲಯದ ವಿಶೇಷ ತಜ್ಞರು ಹಾಗೂ ಗುತ್ತಿಗೆ ಏಜೆನ್ಸಿಯ ತಜ್ಞರು, ಇಸ್ಲಾಂ ಧರ್ಮೀಯರ ಪವಿತ್ರ ಮಸೀದಿ ವಿಸ್ತರಣೆ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News