×
Ad

ಇಂದು ಧರ್ಮಶಾಲಾದಲ್ಲಿ ಕಿವೀಸ್-ಆಸೀಸ್ ಸೆಣಸು

Update: 2016-03-17 23:55 IST

ಪಂದ್ಯಕ್ಕೆ ಮಳೆ ಭೀತಿ

  ಧರ್ಮಶಾಲಾ, ಮಾ.17: ಭಾರತ ವಿರುದ್ಧದ ಮೊದಲ ಪಂದ್ಯವನ್ನು ಜಯಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ನ್ಯೂಝಿಲೆಂಡ್ ತಂಡ ಶುಕ್ರವಾರ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತನ್ನ ಎರಡನೆ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯ ಫೆ.28, 2010ರಲ್ಲಿ ಕೊನೆಯ ಬಾರಿ ಟ್ವೆಂಟಿ-20 ಪಂದ್ಯವನ್ನು ಆಡಿವೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿವೀಸ್ ತಂಡ ಸೂಪರ್ ಓವರ್‌ನಲ್ಲಿ ಸ್ಮರಣೀಯ ಗೆಲುವು ಸಾಧಿಸಿತ್ತು. ಬ್ರೆಂಡನ್ ಮೆಕಲಮ್ ಶತಕದ (56 ಎಸೆತಕ್ಕೆ 116 ರನ್) ನೆರವಿನಿಂದ ಕಿವೀಸ್ 214 ರನ್ ಗಳಿಸಿತ್ತು. ಇದಕ್ಕೆ ತಕ್ಕ ಉತ್ತರ ನೀಡಿದ್ದ ಆಸ್ಟ್ರೇಲಿಯ 214 ರನ್ ಗಳಿಸಿ ಪಂದ್ಯದಲ್ಲಿ ಟೈ ಸಾಧಿಸಿತ್ತು. ಸೂಪರ್ ಓವರ್‌ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಟಿಮ್ ಸೌಥಿ ಕಿವೀಸ್‌ಗೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಆಸ್ಟ್ರೇಲಿಯ ತಂಡ ಕಿವೀಸ್ ವಿರುದ್ಧ ಪಂದ್ಯ ಆಡುವ ಮೂಲಕ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಬುಧವಾರ ಭಾರತದ ವಿರುದ್ಧ ಮೊದಲ ಪಂದ್ಯವನ್ನು ಜಯಿಸಿರುವ ಕಿವೀಸ್ ಮತ್ತೊಂದು ಪಂದ್ಯವನ್ನು ಜಯಿಸಿದರೆ 2007ರ ಬಳಿಕ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೆಮಿಫೈನಲ್‌ಗೆ ತಲುಪುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು.

  ನಾಗ್ಪುರದಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲೆಂಡ್‌ನ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟರ್, ಐಶ್ ಸೋಧಿ ಹಾಗೂ ನಥನ್ ಮೆಕಲಮ್ 9 ವಿಕೆಟ್‌ಗಳನ್ನು ಹಂಚಿಕೊಂಡಿದ್ದರು. ಆಸ್ಟ್ರೇಲಿಯ ತಂಡ ಚುಟುಕು ಪಂದ್ಯದಲ್ಲಿ ಸ್ಪಿನ್ನರ್‌ಗಳೆದುರು ಆಡಲು ಪರದಾಡುತ್ತದೆ. ಆಸೀಸ್‌ನ ಈ ದೌರ್ಬಲ್ಯ ಕಿವೀಸ್‌ಗೆ ವರದಾನವಾಗುವ ಸಾಧ್ಯತೆಯಿದೆ.

ಆಸ್ಟ್ರೇಲಿಯ ತಂಡ ಸ್ವದೇಶದಲ್ಲಿ ನಡೆದಿದ್ದ ಟ್ವೆಂಟಿ-20 ಸರಣಿಯಲ್ಲಿ ಭಾರತ ವಿರುದ್ಧ ಸೋತಿತ್ತು. ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯ ಅಲ್ಲಿ ಫಾರ್ಮ್ ಕಂಡುಕೊಂಡಿತ್ತು. ಕೋಲ್ಕತಾದಲ್ಲಿ ನಡೆದ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ದ ಆಸ್ಟ್ರೇಲಿಯ ಸೋಲುಂಡಿತ್ತು.

ಆಸ್ಟ್ರೇಲಿಯ ತಂಡದಲ್ಲಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸಹಿತ ಮೂವರು ಸ್ಪಿನ್ನರ್‌ಗಳಿದ್ದಾರೆ. ಆಸ್ಟ್ರೇಲಿಯ ಅಂತಿಮ 11ರ ಬಳಗವನ್ನು ಆಯ್ಕೆ ಮಾಡಲು ಸಾಕಷ್ಟು ಆಯ್ಕೆ ಇಟ್ಟುಕೊಂಡಿದೆ. ಟೀಮ್ ನ್ಯೂಸ್: ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಆರಂಭಿಕ ದಾಂಡಿಗನಾಗಿ ಪ್ರಸಿದ್ಧಿ ಪಡೆದಿದ್ದಾರೆ. ಆದರೆ, ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕ ಪ್ರವಾಸದ ವೇಳೆ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. 20,77 ಹಾಗೂ 33 ರನ್ ಗಳಿಸಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.

ವಾರ್ನರ್‌ರೊಂದಿಗೆ ಆ್ಯರೊನ್ ಫಿಂಚ್, ಶೇನ್ ವ್ಯಾಟ್ಸನ್ ಅಥವಾ ಉಸ್ಮಾನ್ ಖ್ವಾಜಾ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಭಾರತ ವಿರುದ್ಧದ ಮೊದಲ ವಿಶ್ವಕಪ್ ಪಂದ್ಯದಲ್ಲಿ 11 ರನ್‌ಗೆ 4 ವಿಕೆಟ್ ಉರುಳಿಸಿದ್ದ ಕಿವೀಸ್‌ನ ಸ್ಪಿನ್ನರ್ ಮಿಚೆಲ್ ಸ್ಯಾಟ್ನರ್ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳನ್ನು ಕಾಡುವ ಸಾಧ್ಯತೆಯಿದೆ. ನ್ಯೂಝಿಲೆಂಡ್ ತಂಡ ಭಾರತ ವಿರುದ್ಧ ಆಡಿದ ತಂಡವನ್ನೇ ಕಣಕ್ಕಿಳಿಸುವ ನಿರೀಕ್ಷೆಯಿದೆ. ಪಿಚ್ ಹಾಗೂ ಹವಾಗುಣ:

ಪಿಚ್‌ನ್ನು ಹೊಸದಾಗಿ ನಿರ್ಮಿಸಲಾಗಿದೆ. ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ಆಡಲಾದ ಪಂದ್ಯದಷ್ಟು ಪಿಚ್ ತಿರುವು ಪಡೆಯುವ ಲಕ್ಷಣ ಕಾಣುತ್ತಿಲ್ಲ್ಲ. ಆದಾಗ್ಯೂ, ವೇಗ ಹಾಗೂ ಬೌನ್ಸ್‌ಗಿಂತ ಸ್ಪಿನ್ ನಿರ್ಣಾಯಕ ಪಾತ್ರವಹಿಸಲಿದೆ. ಶುಕ್ರವಾರ ಮಳೆ ಸುರಿಯುವ ಸಾಧ್ಯತೆಯಿದೆ. ಮಳೆ ಪಂದ್ಯಕ್ಕೆ ಅಡ್ಡಿಯಾಗಬಹುದು.

ಅಂಕಿ-ಅಂಶ:

* ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಐದು ಬಾರಿ ಮುಖಾಮುಖಿಯಾಗಿವೆ. ನಾಲ್ಕು ಬಾರಿ ಆಸ್ಟ್ರೇಲಿಯ ಜಯ ಸಾಧಿಸಿದೆ. ನ್ಯೂಝಿಲೆಂಡ್ 2010ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿತ್ತು.

*ಆಸ್ಟ್ರೇಲಿಯ 2016ರಲ್ಲಿ ಕೇವಲ ಆರು ಟ್ವೆಂಟಿ-20 ಪಂದ್ಯಗಳನ್ನು ಆಡಿದೆೆ. ಆದರೆ, ಈ ಆರು ಪಂದ್ಯಗಳಲ್ಲಿ 25 ಆಟಗಾರರಿಗೆ ಅವಕಾಶ ನೀಡಿದೆ.

ನ್ಯೂಝಿಲೆಂಡ್(ಸಂಭಾವ್ಯ): ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್(ನಾಯಕ), ಕಾಲಿನ್ ಮುನ್ರೊ, ಕೋರಿ ಆ್ಯಂಡರ್ಸನ್, ರಾಸ್ ಟೇಲರ್, ಮಿಚೆಲ್ ಸ್ಯಾಂಟರ್, ಗ್ರಾಂಟ್ ಎಲಿಯಟ್, ಲೂಕ್ ರೊಂಚಿ(ವಿಕೆಟ್‌ಕೀಪರ್), ನಥನ್ ಮೆಕಲಮ್, ಆಡಮ್ ಮಿಲ್ನೆ, ಐಶ್ ಸೋಧಿ.

 ಆಸ್ಟ್ರೇಲಿಯ(ಸಂಭಾವ್ಯ): ಆ್ಯರೊನ್ ಫಿಂಚ್, ಶೇನ್ ವ್ಯಾಟ್ಸನ್, ಸ್ಟೀವನ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಜೇಮ್ಸ್ ಫಾಕ್ನರ್, ಪೀಟರ್ ನೇವಿಲ್(ವಿಕೆಟ್‌ಕೀಪರ್), ಆ್ಯಶ್ಟನ್ ಅಗರ್/ಜಾನ್ ಹೇಸ್ಟಿಂಗ್ಸ್/ನಥನ್ ಕೌಲ್ಟರ್-ನೀಲ್, ಆಡಮ್ ಝಾಂಪ, ಜೊಶ್ ಹೇಝಲ್‌ವುಡ್.

ಪಂದ್ಯದ ಸಮಯ: ಮಧ್ಯಾಹ್ನ 3:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News