ಶಂಕಾಸ್ಪದ ಬೌಲಿಂಗ್ ಆರೋಪ: ಬಾಂಗ್ಲಾದ ತಸ್ಕಿನ್ ಅಹ್ಮದ್, ಅರಾಫತ್ ಸನ್ನಿ ಅಮಾನತು
ಹೊಸದಿಲ್ಲಿ, ಮಾ.19: ಶಂಕಾಸ್ಪದ ಬೌಲಿಂಗ್ ನಡೆಸಿದ ಆರೋಪದಲ್ಲಿ ಬಾಂಗ್ಲಾದೇಶದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಹಾಗೂ ಎಡಗೈ ಸ್ಪಿನ್ನರ್ ಅರಾಫತ್ ಸನ್ನಿ ಅವರನ್ನು ಐಸಿಸಿ ಶನಿವಾರ ಅಮಾನತು ಮಾಡಿದೆ. ಈ ಬೆಳವಣಿಗೆಯು ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ಬಾಂಗ್ಲಾದೇಶಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಸ್ವತಂತ್ರ ಸಮಿತಿಯು ಬಾಂಗ್ಲಾದೇಶದ ಅರಾಫತ್ ಸನ್ನಿ ಹಾಗೂ ತಸ್ಕಿನ್ ಅಹ್ಮದ್ ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿತ್ತು ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಇಬ್ಬರು ಬೌಲರ್‌ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಪ್ರಸ್ತುತ ಬಾಂಗ್ಲಾದೇಶದ ಪ್ರಮುಖ ವೇಗದ ಬೌಲರ್ ಆಗಿರುವ ತಸ್ಕಿನ್ 14 ಏಕದಿನಗಳಲ್ಲಿ 21 ವಿಕೆಟ್ ಹಾಗೂ 13 ಟ್ವೆಂಟಿ-20ಯಲ್ಲಿ 9 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ಸನ್ನಿ 16 ಏಕದಿನಗಳಲ್ಲಿ 24 ವಿಕೆಟ್ ಹಾಗೂ 10 ಟ್ವೆಂಟಿ-20 ಪಂದ್ಯದಲ್ಲಿ 12 ವಿಕೆಟ್ ಪಡೆದಿದ್ದಾರೆ.
ಮಾ.9 ರಂದು ಧರ್ಮಶಾಲಾದಲ್ಲಿ ಹಾಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯ ಕೊನೆಗೊಂಡ ನಂತರ ಅರಾಫತ್ ಹಾಗೂ ತಸ್ಕಿನ್ ವಿರುದ್ಧ ಶಂಕಾಸ್ಪದ ಬೌಲಿಂಗ್ ಆರೋಪ ಕೇಳಿ ಬಂದಿದ್ದು, ಈ ಇಬ್ಬರು ಕಳೆದ ವಾರ ಚೆನ್ನೈನಲ್ಲಿ ಬೌಲಿಂಗ್ ಪರೀಕ್ಷೆಗೆ ಒಳಗಾಗಿದ್ದರು. ಪಾಕ್ ವಿರುದ್ಧದ ಸೂಪರ್-10 ಪಂದ್ಯದಲ್ಲಿ ಆಡಿರುವ ಸನ್ನಿ 34 ರನ್‌ಗೆ 2 ವಿಕೆಟ್ ಹಾಗೂ ತಸ್ಕಿನ್ 32 ರನ್‌ಗೆ 2 ವಿಕೆಟ್ ಪಡೆದಿದ್ದರು.