ಬ್ಯಾರಿಭಾಷೆ’ ದ್ರಾವಿಡ ಭಾಷೆಯೇ?

Update: 2016-03-21 18:04 GMT

ಬ್ಯಾರಿ ಭಾಷೆಯ ಕುರಿತಾಗಿ ಇತ್ತೀಚಿನವರೆಗೆ ವಿಶೇಷ ಅಧ್ಯಯನ ನಡೆದಿಲ್ಲ. ಬ್ಯಾರಿ ಅಧ್ಯಯನಕ್ಕೆ ಆಕರಗಳಾಗಿ ಲಭ್ಯವಿರುವ ಕೃತಿಗಳು ‘ತುಳುನಾಡಿನ ಬ್ಯಾರಿಗಳು’ ‘ಬ್ಯಾರಿ ಭಾಷೆ’ ಮತ್ತು ‘ಪೆರಿಮೆ’. ಸಾಹಿತ್ಯಿಕವಾಗಿ ಹೊಸಹೊಸ ಕೃತಿಗಳು ಈಗ ಬರಲಾರಂಭಿಸಿವೆ. ‘ಮಾಪ್ಲಾ ಮಲೆಯಾಲ’ ಭಾಷೆ ಎಂಬ ಹೆಸರಿನಲ್ಲಿ ಡಾ.ಸುಶೀಲಾ ಉಪಾಧ್ಯಾಯರು ಮಾಡಿದ ಸಂಶೋಧನಾ ಕೃತಿಯೇ ‘ಬ್ಯಾರಿ ಭಾಷೆ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಅದು ಮಾಪ್ಲಾ ಭಾಷೆಯಲ್ಲ, ಬ್ಯಾರಿಗಳ ಭಾಷೆ. ಮಾಪ್ಲಾ ಭಾಷೆಯೂ ಅಲ್ಲ, ಮಲೆಯಾಲವೂ ಅಲ್ಲ ಎಂದು ನಿರೂಪಿಸಿದವನು ನಾನೇ. ಡಾ. ಸುಶೀಲಾ ಉಪಾಧ್ಯಾಯರು ನನ್ನ ವಿವರಣೆಯನ್ನು ಸಮ್ಮತಿಸಿ ಬ್ಯಾರಿ ಭಾಷೆಯೆಂಬುದನ್ನು ಸಮರ್ಥಿಸಿದರು. 1975 ರಿಂದೀಚೆಗೆ ನಾನು ಸಮರ್ಥಿಸಿಕೊಂಡು ಬಂದ ಬ್ಯಾರಿ ಆಂದೋಲನ ಮತ್ತು ಬ್ಯಾರಿ ಸಮರ್ಥನೆಗೆ ಇಂದು ಸರಕಾರಿ ಮನ್ನಣೆ ದೊರಕಿದೆ. ಆದರೆ ಬ್ಯಾರಿ ಭಾಷೆಯ ಬಗ್ಗೆ ಇನ್ನೂ ಬಹಳಷ್ಟು ಸಂಶಯಗಳು ಗೊಂದಲಗಳು ಉಳಿದುಕೊಂಡಿದೆ.

ಅದನ್ನು ನಿವಾರಿಸಲು ಕಳೆದ ಆರು ವರ್ಷಗಳಿಂದ ಬ್ಯಾರಿ ಮಾತನಾಡುವ ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳ ಬ್ಯಾರಿಗಳ ಆಡು ಭಾಷೆಗಳ ಪದಗಳನ್ನು ಸಂಗ್ರಹಿಸಿದಲ್ಲದೆ ಬ್ಯಾರಿ ಪದಪ್ರಯೋಗಗಳ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೇನೆ. ಈ ವರೆಗೆ ಬ್ಯಾರಿಗಳಲ್ಲಿ ಮಾತ್ರವಲ್ಲದೆ ಭಾಷಾ ತಜ್ಞರಲ್ಲೂ ಉಳಿದಿರುವ ಸಂಶಯಗಳನ್ನು ನಿವಾರಿಸಲು ನಾನು ಕಂಡ ಕೆಲವು ಸತ್ಯಾಂಶಗಳನ್ನು ಈ ಲೇಖನದ ಮೂಲಕ ತೆರೆದಿಡುತ್ತೇನೆ.

ಭಾಷಾ ತಜ್ಞರು ದ್ರಾವಿಡ ಭಾಷೆಯೆಂದು ಗುರುತಿಸಿದ ಮೂಲ ಭಾಷೆ ತಮಿಳು. ತಮಿಳು ಭಾಷೆ ಪ್ರಾಚೀನವಾಗಿದ್ದು, ಕ್ರಿ.ಶ. 6ನೇ ಶತಮಾನದಲ್ಲಿ ಸಂಗಂ ಸಾಹಿತ್ಯವಾಗಿ ಖ್ಯಾತಿ ಪಡೆದಿತ್ತು. ಸಂಸ್ಕೃತದ ಪ್ರಭಾವವಿಲ್ಲದ ತಮಿಲಕಂ ಅಥವಾ ಚೆಂತಮಲ್ ಎಂಬ ಸ್ವತಂತ್ರ ಭಾಷೆಯಾಗಿ ಸಂಸ್ಕೃತ ಭಾಷೆಗೆ ಸರಿಸಮಾನವಾದ ಮಹಾಕಾವ್ಯಗಳನ್ನು ನೀಡಿತ್ತು. ಈ ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದು ಪ್ರತ್ಯೇಕಿಸಲ್ಪಟ್ಟು ಸ್ವತಂತ್ರವಾಗಿ ಬೆಳೆದು ಬಂದ ಭಾಷೆಗಳನ್ನು ದ್ರಾವಿಡ ಭಾಷೆಯೆಂದು ತಜ್ಞರು ಗುರುತಿಸಿಕೊಂಡಿದ್ದಾರೆ. ಈ ವರೆಗೆ ಪ್ರಕಟವಾದ ದ್ರಾವಿಡ ಭಾಷಾ ಗುಂಪಿನಲ್ಲಿ ಐದು ಭಾಷೆಗಳು ಮಾತ್ರ ಇವೆ. ತಮಿಳು, ಮಲೆಯಾಲಂ, ಕನ್ನಡ, ತೆಲುಗು ಮತ್ತು ತುಳು ಭಾಷೆಗಳನ್ನು ಪಂಚದ್ರಾವಿಡ ಭಾಷೆ ಎಂದು ಗುರುತಿಸಲಾಗಿದೆ. ಇವುಗಳಲ್ಲಿ ತಮಿಳಿನ ಪ್ರಭಾವವಿದ್ದು, ಸ್ವತಂತ್ರವಾಗಿ ಬೆಳೆದಿರುವುದೇ ಇದಕ್ಕೆ ಕಾರಣ. ಆದರೆ ಬ್ಯಾರಿ ಭಾಷೆಯಲ್ಲಿ ಬಹುಮಟ್ಟಿಗೆ ತಮಿಳು ಪ್ರಭಾವವೇ ಇದ್ದು, ಮಲೆಯಾಲಕ್ಕಿಂತಲೂ ಪ್ರಾಚೀನವಾದ ತುಳು ಭಾಷೆಗೆ ಸಮಾನವಾಗಿ ಬೆಳೆದುಬಂದಿರುವುದನ್ನೂ ಸಾಧಾರಣವಾಗಿ ಗುರುತಿಸಬಹುದಾಗಿದೆ. ಬ್ಯಾರಿ ಭಾಷೆ ದ್ರಾವಿಡ ಗುಂಪಿನ ಭಾಷೆ ಎಂಬುದನ್ನು ಸಂದೇಹರಹಿತವಾಗಿ ನಿರೂಪಿಸಬಹುದಾಗಿದೆ. ಮೂಲಪದಗಳ ಪದಪ್ರಯೋಗ ವಿಧಾನ ಮಾತ್ರವಲ್ಲ, ಸಂಸ್ಕೃತ ಭಾಷಾ ಪ್ರಭಾವಿತ ಗ್ರಂಥ ಭಾಷೆಯ ಪ್ರಭಾವವೇ ಇಲ್ಲದ ತಮಿಳಿಗೆ ಇತರ ಭಾಷೆಗಳಿಗಿಂತಲೂ ಸಮೀಪ ಸಂಬಂಧ ಇರುವ ಬ್ಯಾರಿ ಭಾಷೆಯನ್ನು ದ್ರಾವಿಡ ಭಾಷೆ ಗುಂಪಿಗೆ ಸೇರಿಸದಿರುವುದು ಗಮನಾರ್ಹ ವಿಚಾರವಾಗಿದೆ. ಮಾಪ್ಲಾ ಭಾಷೆ ಎಂದು ಗುರುತಿಸಿದ ಡಾ. ಸುಶೀಲ ಉಪಾಧ್ಯಾಯರು ಕೂಡಾ ಬ್ಯಾರಿ ಭಾಷೆ ಸ್ವತಂತ್ರ ದ್ರಾವಿಡ ಭಾಷೆ ಎಂದು ಗುರುತಿಸಿಲ್ಲ. ಶೀರ್ಷಿಕೆಯಲ್ಲೇ ಮಲೆಯಾಲದ ಉಪಭಾಷೆ ಅಥವಾ ಪ್ರಬೋಧ ಎಂಬ ನಿಲುವನ್ನು ತೋರಿಸಿದ್ದಾರೆ. ತಮಿಳು ಮೂಲದಿಂದ ನೇರವಾಗಿ ಬ್ಯಾರಿ ಭಾಷೆಗೆ ಬಂದವುಗಳೆಂಬುದನ್ನು ಬ್ಯಾರಿ ಭಾಷೆಯ ಪ್ರಾಚೀನತೆಯೇ ಎತ್ತಿ ತೋರಿಸುತ್ತದೆ.

ಮಲೆಯಾಲ ಭಾಷೆಯ ಉದ್ಭವ ಮತ್ತು ಬೆಳವಣಿಗೆಯನ್ನು ಪರಿಶೀಲಿಸಿದರೆ, ಸಂಪೂರ್ಣ ಗ್ರಂಥ ಭಾಷಾ ಭಾವವಿಲ್ಲದ ಬ್ಯಾರಿ ಭಾಷೆ, ಮಲೆಯಾಲದಿಂದ ಕವಲೊಡೆದುದಲ್ಲ. ನೇರವಾಗಿ ತಮಿಳಿನಿಂದಲೇ ಕವಲೊಡೆದು ಬಂದ ಭಾಷೆ ಎಂಬುದು ಸಾಬೀತಾಗುತ್ತದೆ. ಬ್ಯಾರಿ ಭಾಷೆಯಲ್ಲಿ ಗ್ರಂಥ ಭಾಷೆಯ ಕನಿಷ್ಠ ಪ್ರಭಾವವೂ ಇಲ್ಲ.

 ಇನ್ನೊಂದು ಮಹತ್ವ ಪೂರ್ಣವಾದ ಬ್ಯಾರಿ ಭಾಷಾ ಅಸ್ತಿತ್ವದ ಪುರಾವೆ ಬ್ಯಾರಿಗಳಲ್ಲಿ ಬಳಕೆಯಲ್ಲಿದ್ದ ಬಟ್ಟೆಲುತ್ತು. ಅಂದರೆ ಬಟ್ಟೆ ಬರಹ. 1890ರಲ್ಲಿ ಪ್ರಥಮ ಭೂಸರ್ವೇ ಜಿಲ್ಲಾಧಿಕಾರಿಯಾಗಿದ್ದ ಕೋಚ್‌ಮನ್‌ರಿಂದ ನಡೆಯಿತು. ಮೊದಲ ಅಡಂಗಳ್ ದಾಖಲೆಗಳು ಕರಾವಳಿ ಜಿಲ್ಲಾ ಕಚೇರಿಗಳಲ್ಲಿ ಈಗಲೂ ಇವೆ. ತುಳುನಾಡಿನ ಬ್ಯಾರಿಗಳ ಹೆಸರು ಮತ್ತು ವಾಸ ಸ್ಥಳಗಳು ಮಾತ್ರವಲ್ಲ ಆರ್ಥಿಕ ಸ್ಥಿತಿಗತಿಗಳು ಕೂಡಾ ಆ ದಾಖಲೆಯಲ್ಲಿವೆ. ಉತ್ತರ ಮಲಬಾರಿನಲ್ಲಿ, ಕಾಸರಗೋಡಿನಿಂದ ಬೈಂದೂರಿನವರೆಗೂ ತುಳುನಾಡಾಗಿ ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಬ್ಯಾರಿಗಳಿದ್ದರೆಂಬುದನ್ನು ಇವರಿಂದ ತಿಳಿಯಬಹುದು. 1900 ರಿಂದೀಚೆಗೆ ನೋಂದಣಿ ದಾಖಲೆಗಳು ಆರಂಭವಾಗಿದ್ದು, ಮಂಗಳೂರು, ಮಂಜೇಶ್ವರ, ಕಾಸರಗೋಡಿನ ನೋಂದಣಿ ಕಚೇರಿಗಳಿಂದ ಬ್ಯಾರಿ ಭೂದಾಖಲೆಗಳನ್ನು ಪರಿಶೀಲಿಸಿದರೆ, ಬಟ್ಟೆ ಬರಹದ ಸಹಿಯನ್ನು ಕಾಣಬಹುದು. ಅಂತಹ ಹಲವಾರು ದಾಖಲೆಗಳನ್ನು ನಾನು ಪರಿಶೀಲಿಸಿದ್ದೇನೆ. ಸಂಶೋಧನಾ ಅವಧಿಯಲ್ಲಿ ಭೇಟಿಯಾದ 20ಕ್ಕಿಂತ ಹೆಚ್ಚು ಹಿರಿಯ ಬ್ಯಾರಿಗಳು ತಮ್ಮ ವ್ಯವಹಾರಗಳ ಪತ್ರಗಳನ್ನು ಬಟ್ಟೆ ಬರಹದಲ್ಲೇ ಬರೆಯುತ್ತಿದ್ದರು. 1937ರಲ್ಲಿ ಪ್ರಚಲಿತವಿದ್ದ ಶಾರದಾ ಡೈರಿಯಲ್ಲಿ ಬರೆದಿಟ್ಟ ಬಟ್ಟೆ ಬರಹದ ದಾಖಲೆ ನನ್ನಲ್ಲಿದೆ. ಆಗ ಬ್ಯಾರಿಗಳಲ್ಲಿ ಬಳಕೆಯಲ್ಲಿದ್ದ ವ್ಯವಹಾರ ಬರಹ ‘ಬಟ್ಟೆಲುತ್ತು’ ಆಗಿತ್ತು. ಈ ಬಟ್ಟೆ ಬರಹ ಮೂಲ ತಮಿಳು ಲಿಪಿಯ ಒಂದು ಪ್ರಭೇದವೇ ಆಗಿತ್ತು. ತುಳು ಲಿಪಿಯೆಂದು ಗುರುತಿಸಲಾದ ಲಿಪಿಯನ್ನೇ ಹೋಲುವ ಈ ಲಿಪಿಯು, ಮೂಲತಃ ತಿರುವಾಂಕೂರು ರಾಜ್ಯದ ಬುಡಕಟ್ಟು ಜನಾಂಗದಲ್ಲಿ ಬಳಕೆಯಲ್ಲಿದ್ದು ‘ಮಲೆಯಾಯ್ಮೆ’ ಭಾಷೆಯಲ್ಲಿ ಬಳಕೆಯಾಗಿತ್ತು. ಅವರ ಪುಟಗಳು, ಬರಹಗಳು ಇದೇ ಲಿಪಿಯಲ್ಲಿತ್ತು. ಪೋರ್ಚುಗೀಸರು ಈ ಲಿಪಿಯನ್ನು ಗುರುತಿಸಿಕೊಂಡಿದ್ದರು. ಆದರೆ 1820ರಲ್ಲಿ ಬ್ರಿಟಿಷ್ ಆಡಳಿತ ಈ ಲಿಪಿ ಬಳಕೆಗೆ ನಿಷೇಧ ಹೇರಿತ್ತು. ಬ್ರಿಟಿಷ್ ಆಡಳಿತದಲ್ಲಿ ಮಲೆಯಾಲ ಬೆಳವಣಿಗೆ ಆದಾಗ ಈ ಲಿಪಿಗೆ ಮನ್ನಣೆ ಇರಲಿಲ್ಲ. ಆದರೆ, ತುಳು ಲಿಪಿಯಂತೆಯೇ ಬ್ಯಾರಿಗಳಲ್ಲಿ ಈ ಲಿಪಿ ಬಳಕೆ ಉಳಿದಿತ್ತು. ತಮಿಳಿನಿಂದ ಪ್ರತ್ಯೇಕವಾದ ಈ ಲಿಪಿ ಮತ್ತು ಭಾಷೆಯ ಅಸ್ತಿತ್ವವೇ ಬ್ಯಾರಿಗಳ ಪ್ರಾಚೀನತೆಯನ್ನು ಎತ್ತಿ ತೋರಿಸುತ್ತದೆ. ಮಲೆಯಾಳಿಗಳಿಗೆ ಒಲ್ಲದ ಈ ಲಿಪಿ ಬ್ಯಾರಿಗಳಲ್ಲಿ ಮಾತ್ರ ಉಳಿದಿರುವುದು ಬ್ಯಾರಿ ಭಾಷಾ ಮೂಲವನ್ನು ತೋರಿಸುತ್ತದೆ. ಮಲಬಾರಿನ ಮಾಪಿಳ್ಳೆಗಳಲ್ಲಿ ಈ ಬರಹವಿರಲಿಲ್ಲ. ಈ ಬಟ್ಟೆಲುತ್ತು ಲಿಪಿಯೇ ಕೋಲೆಲುತ್ತು ಆಗಿ ಮಾರ್ಪಟ್ಟು, ಗ್ರಂಥ ಭಾಷಾ ಪ್ರಭಾವದಿಂದ ಆಧುನಿಕ ಮಲೆಯಾಲ ಲಿಪಿಯಾಗಿ ಪರಿವರ್ತನೆಗೊಂಡಿತು.

ಇನ್ನೊಂದು ಪುರಾವೆ ಬ್ಯಾರಿ ಭಾಷೆಗೂ ದ್ರಾವಿಡ ಭಾಷೆಗೂ ಇರುವ ನಿಕಟ ಸಂಬಂಧ.

      1. ಸಂಗಂ ತಮಿಳಿನಲ್ಲಿ ಮಹಾಪ್ರಾಣಾಕ್ಷರಗಳಿಲ್ಲ. ಬ್ಯಾರಿ ಭಾಷೆಯಲ್ಲೂ ಮಹಾ ಪ್ರಾಣಾಕ್ಷರಗಳಿಲ್ಲ ಎಂಬುದನ್ನು ಭಾಷಾ ತಜ್ಞರು ನಿರೂಪಿಸಿದ್ದಾರೆ.

      2. ತಮಿಳಿನಲ್ಲಿ ಗ್ರಂಥ ಭಾಷಾ ಪ್ರಭಾವವೇ ಇಲ್ಲ. ಬ್ಯಾರಿ ಭಾಷೆಯಲ್ಲೂ ಗ್ರಂಥ ಭಾಷಾ ಪ್ರಭಾವ ಇಲ್ಲ. ಬದಲಾಗಿ ಅರಬೀ ಭಾಷಾ ಪ್ರಭಾವವಿದೆ. ಧಾರಾಳ ಅರಬೀ ಪದಗಳು ಬಳಕೆಯಾಗಿವೆ.

      3. ತಮಿಳಿನಲ್ಲಿ ಹನ್ನೆರಡು ಸ್ವರಾಕ್ಷರಗಳು ಮತ್ತು ಹದಿನೆಂಟು ವ್ಯಂಜನಾಕ್ಷರಗಳು ಮಾತ್ರ ಇವೆ. ಬ್ಯಾರಿ ಭಾಷೆಯಲ್ಲಿ ಹನ್ನೆರಡು ಸ್ವರಾಕ್ಷರಗಳು ಮತ್ತು ಇಪ್ಪತ್ತೊಂದು ವ್ಯಂಜನಾಕ್ಷರಗಳಿವೆ. ಒಟ್ಟು ಮೂವತ್ತ ಮೂರು ಅಕ್ಷರಗಳು. ಬ್ಯಾರಿ ಪದೋಚ್ಛಾರಗಳು ಸ್ವತಂತ್ರವಾಗಿವೆೆ. ಗ್ರಂಥಭಾಷಾ ಛಾಯೆ ಇಲ್ಲ. ಮಲೆಯಾಲದಲ್ಲಿ 52 ಅಕ್ಷರಗಳಿವೆ.

      4. ತಮಿಳಿನಲ್ಲಿ ಒಂದೇ ‘ಶ’ ಮಾತ್ರ ಬಳಕೆಯಲ್ಲಿತ್ತು. ಕ್ರಮೇಣ ‘ಸ’ ವನ್ನು ಗ್ರಂಥ ಭಾಷೆಯಿಂದ ಎರವಲು ಪಡೆಯಲಾಯಿತು. ಬ್ಯಾರಿ ಭಾಷೆಯಲ್ಲಿ ‘ಸ’ ಮಾತ್ರ ಬಳಕೆಯಲ್ಲಿದೆ. ಮಲೆಯಾಲದಲ್ಲಿ ‘ಸ,ಶ,ಷ’ ಮೂರು ಅಕ್ಷರಗಳು ಬಳಕೆಯಲ್ಲಿವೆ.

      5. ಬ್ಯಾರಿ ಭಾಷೆಯಲ್ಲಿ ಮಲೆಯಾಲದಿಂದ ಎರವಲು ಬಂದವುಗಳೆಂದು ಸೂಚಿಸಿದ ಪದಗಳೆಲ್ಲ ಮೂಲ ತಮಿಳು ಪದಗಳೇ. ಕ್ರಿಯಾಪದಗಳ ಮೂಲ ಧಾತುಗಳು ಕೂಡಾ ತಮಿಳು ಮೂಲದವುಗಳೇ.

ಉದಾ: ಇಡ್, ಎಡ್, ಕೊಡ್... ಇತ್ಯಾದಿ. ಬ್ಯಾರಿ ಭಾಷೆ ದ್ರಾವಿಡ ಭಾಷೆಯೆಂದು ನಿರೂಪಿಸಬಹುದಾದ ಸಾವಿರಾರು ತಮಿಳು ಪದಗಳಿವೆ. ಉದಾ: ವಾರಗಳು, ಞಾಯರ್, ತಿಂಗಲ್, ಚೊವ್ವ, ಬುದನ್, ವ್ಯಾಯ, ಬೆಲ್ಲಿ, ಸನಿ, ಹೀಗೇ ಬ್ಯಾರಿಗೆ ಬಂದಿವೆ. ಬ್ಯಾರಿ... ‘ಆಸೆ! ಉದಾ: ಬೆಲ್ಲ್ಲಿಯಾಸೆ, ಸನಿಯಾಸೆ ಇತ್ಯಾದಿ, ಬ್ಯಾರೀಕರಣವಾಗಿ ಪ್ರಯೋಗವಾಗಿವೆ. ತನ್ನಿ, ಮಿನ್ನ್, ಪೆನ್ನ್, ಕನ್ನ್, ತಿನ್ನ್-ಬ್ಯಾರಿ ಉಚ್ಚಾರಕ್ಕೆ ಹೊಂದಿಕೊಂಡು ಬಳಕೆಯಾಗಿವೆ. ಬಾ, ಪೋ, ಕಾತ್, ತೀ, ಮಲೆ, ಕಾಡ್, ನಾಡ್, ಪಾಲ್, ತಯರ್, ಮೋರ್, ಉಪ್ಪು, ಕಾರ, ಕೈಪೆ, ಕರಿ, ಚಿರಿ, ಪೊರಿ, ಮೀನ್, ಆರ್, ಏಲ್, ಎಟ್ಟ್, ಒಂಬೊವು, ಪತ್ತ್, ನೂರ್, ಆಯಿರ, ಲಕ್ಷ, ಕೋಡಿ, ನಲ್ಲದ್, ಕೆಟ್ಟದ್ ಇತ್ಯಾದಿ. ಸಾವಿರಾರು ಪದಗಳು ಯಥಾವತ್ತಾಗಿ ಬ್ಯಾರಿ ಭಾಷೆಯಲ್ಲಿ ಬಳಕೆಯಾಗಿವೆ. ಇಂತಹದೇ ಪದಗಳು ಮಲೆಯಾಲದಲ್ಲೂ ಇವೆಯಾದರೂ ಗ್ರಂಥ ಭಾಷಾ ಉಚ್ಛಾರಗಳು ಮತ್ತು ವ್ಯಾಕರಣಕ್ಕೆ ಒಗ್ಗಿಕೊಂಡಿವೆ. ಬ್ಯಾರಿ ಭಾಷೆಯಲ್ಲಿ ಸ್ವತಂತ್ರ ಉಚ್ಚಾರವನ್ನು ಉಳಿಸಿಕೊಂಡಿವೆ. ಪ್ರಯೋಗದಲ್ಲೂ ವ್ಯತ್ಯಾಸವಿದೆ. ಬ್ಯಾರಿ ಭಾಷಾ ಜನರಿರುವ ತುಳುನಾಡಿನ ನೆರೆಯಲ್ಲೇ ಮಲೆಯಾಳಿಗರ ಮಲಬಾರ್ ಇದ್ದು ಬ್ಯಾರಿ ಭಾಷಾ ಪ್ರಭಾವ ಮಲೆಯಾಲದ ಮೇಲಾಗಿರಬಹುದೆಂದು ತಪ್ಪಾಗಲಾರದು.

ಬ್ಯಾರಿ ಭಾಷೆಯ ಮೂಲಸ್ಥಾನ ಮಂಗಳೂರು ಮತ್ತು ಸುತ್ತಮುತ್ತಲ ಸುಮಾರು ಮೂವತ್ತು ಕಿಲೋ ಮೀಟರುಗಳ ದೂರ ಮಾತ್ರ ಇದ್ದು, ಈ ಭಾಷಾ ಪ್ರಭಾವ ಉತ್ತರಕ್ಕೆ ಬೈಂದೂರಿನವರೆಗೂ ದಕ್ಷಿಣಕ್ಕೆ ಹೊಸದುರ್ಗದವರೆಗೂ ವಿಸ್ತರಿಸಿತ್ತು. ದಕ್ಷಿಣದಲ್ಲಿ ಬಹಳಷ್ಟು ಮಲೆಯಾಳೀಕರಣದ ಪ್ರಭಾವ ಆಗಿದೆ. ‘ಮಾಪ್ಲಾ’ಗಳೂ, ಬ್ಯಾರಿಗಳೂ ಮುಸ್ಲಿಮರೇ ಆಗಿದ್ದು, ಬ್ಯಾರಿಗಳಿಗೆ ಧಾರ್ಮಿಕ ಆಶ್ರಯ ಮಲೆಯಾಲದಿಂದಲೇ ಬಂದಿರುವುದರಿಂದ ‘ಮಿಶ್ರ ಭಾಷೆ’ ಹುಟ್ಟಿಕೊಂಡಿತು. ಮಾಪ್ಲಾ ಪಾಟುಗಳು, ಮಾಲೆ, ಕಿಸ್ಯ ಪಾಡುಗಳೆಲ್ಲಾ ಮಾಪ್ಲಾಗಳಿಂದ ಆಯಾಮವಾಗಿದೆ. ಅರಬೀ ಲಿಪಿಯಲ್ಲಿ ಬರೆಯಲಾಗುತ್ತಿದ್ದ, ‘ಅರಬೀ ಮಲೆಯಾಲ’ವೆಂಬ, ಮಿಶ್ರಭಾಷೆ ಬ್ಯಾರಿಗಳಲ್ಲೂ ಪ್ರಚಾರದಲ್ಲಿತ್ತು. ಇದರಲ್ಲಿ ಬ್ಯಾರಿ, ತುಳು, ಅರಬಿ, ಮಲೆಯಾಲ ಪದಗಳ ಮಿಶ್ರಣವಾಗಿ ಬಳಕೆಯಾಗಿತ್ತು. ಬ್ಯಾರಿ ಭಾಷಾ ಬೆಳವಣಿಗೆಗೆ ಇವು ಪೂರಕವಾಗಿರಲಿಲ್ಲ.

ಮಲಬಾರಿನ ಮಾಪ್ಲಾಗಳು, ತುಳುನಾಡಿನ ಬ್ಯಾರಿಗಳಂತೆಯೇ ಅರಬೀ ಸಂಪರ್ಕದಿಂದ ಹುಟ್ಟಿಕೊಂಡ ಜನಾಂಗವಾಗಿತ್ತು. ವ್ಯಾಪಾರದಲ್ಲಿ ಚತುರರಾಗಿದ್ದು, ದೀನೀ ಪ್ರಚಾರದಲ್ಲೂ, ನಾಯಕತ್ವದಲ್ಲೂ ಪ್ರಾಮುಖ್ಯತೆ ಪಡೆದು ‘ಮಹಾಪಿಳ್ಳೆ’ ‘ಮಾಪಿಳ್ಳೆ’ ಎಂದು ತಮಿಳರಿಂದ ಗುರುತಿಸಲ್ಪಟ್ಟಿದ್ದರೆಂದು ಒಂದು ಅಭಿಪ್ರಾಯವಿದೆ. ಜಾತಿಯಲ್ಲಿ ಮಾಪ್ಲಾಗಳೂ, ಬ್ಯಾರಿಗಳೂ, ಮುಸ್ಲಿಮರೇ. ಮುಸ್ಲಿಮರಲ್ಲಿ ಗಮನಾರ್ಹ ಉಪಜಾತಿಗಳಿಲ್ಲ. ಮಾಪ್ಲಾಗಳು ಒಂದು ಪ್ರಾದೇಶಿಕ ಮುಸ್ಲಿಮ್ ಜನಾಂಗ. ಬ್ಯಾರಿಗಳೂ ತುಳುನಾಡಿನ ಮುಸ್ಲಿಮ್ ಜನಾಂಗ ಮಲಬಾರಿನ ‘ಮಾಪ್ಲಾ’ಗಳು ಮಾಪ್ಲಾ ಜಾತಿ ಎನ್ನುವಂತೆ ಮಾಡಿದ ಬ್ರಿಟಿಷ್ ಆಡಳಿತ, ಮಾಪ್ಲಾಗಳ ಧಾರ್ಮಿಕ ಪ್ರಭಾವದಿಂದಾಗಿ, ಬ್ಯಾರಿಗಳು ಮಾಪ್ಲಾ ಜಾತಿಯನ್ನು ಲೇಪಿಸಿಕೊಂಡರು. ಮೂಲತಃ ‘ಬ್ಯಾರಿ ಜಾತಿ’ ಎಂದು ಗುರುತಿಸಿಕೊಳ್ಳಲು ವಿಫಲರಾದರು. ಬ್ಯಾರಿ ಭಾಷೆ, ಲಿಪಿ ಮತ್ತು ಬ್ಯಾರಿ ಜನಾಂಗವನ್ನು ಬ್ರಿಟಿಷ್ ಕಡೆಗಣಿಸಿತ್ತು. ಶ್ರೀಮಂತ ವರ್ಗವನ್ನು ‘ಸಾಹೇಬ’ರೆಂದು ಗುರುತಿಸಿ, ‘ಸರ್’ ಬಹುದೂರ್, ಸಾಹುಕಾರರೆಂಬ ಬಿರುದನ್ನು ಕೊಟ್ಟು ತಮ್ಮ ಆಡಳಿತಾನುಕೂಲಕ್ಕೆ ಬಳಸಿಕೊಂಡರು. ಪರಿಣಾಮವಾಗಿ ‘ಬ್ಯಾರಿ’ಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿತ್ತು. ಬ್ಯಾರಿಗಳು ಮಾಪ್ಲಾಗಳಲ್ಲ ಎಂಬುದನ್ನು ಸಾಕ್ಷಾಧಾರಗಳ ಮೂಲಕ ನಾನು ಬರೆದ ‘ತುಳುನಾಡಿನ ಬ್ಯಾರಿಗಳು’ ಗ್ರಂಥದಲ್ಲಿ ದೃಢೀಕರಿಸಿದ್ದೇನೆ.

ಬ್ಯಾರಿ ಭಾಷೆ ಸ್ವತಂತ್ರ ದ್ರಾವಿಡ ಭಾಷೆಯೇ, ಭಾಷಾ ತಜ್ಞರಾದ ಡಾ. ವಿವೇಕ ರೈ, ಡಾ. ವಿ.ವಿ. ನಾವಡ, ಡಾ. ಉಪಾಧ್ಯಾಯರು ಇದನ್ನೀಗ ಸಮರ್ಥಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಇಂತಹ ಭಾಷಾ ತಜ್ಞರ ಮಾರ್ಗದರ್ಶನದಲ್ಲಿ ನನ್ನ ಹಾಗೂ ಸಹಸಂಪಾದಕರ ಸಂಪಾದಕತ್ವದಲ್ಲಿ ಸದ್ಯದಲ್ಲೇ ಹೊರತರಲಿರುವ ಬ್ಯಾರಿ ಭಾಷಾ ನಿಘಂಟು ಇಂತಹ ಅಧ್ಯಯನಕ್ಕೆ ಪೂರಕವಾಗಬಹುದು. ಬ್ಯಾರಿ ಭಾಷೆ ಸ್ವತಂತ್ರ ಭಾಷೆಯೆಂದು ನಿರೂಪಿಸಲು ಇನ್ನಷ್ಟು ಅಧ್ಯಯನ, ಸಂಶೋಧನೆಗಳು ಬೇಕಾಗಬಹುದು. ಕರ್ನಾಟಕ ಸರಕಾರದ ಪ್ರೋತ್ಸಾಹದಿಂದ ಬ್ಯಾರಿ ಭಾಷೆ ಬೆಳೆಯಲಾರಂಭಿಸಿದೆ. ಸ್ವತಂತ್ರಪರಿಪೂರ್ಣ ಭಾಷೆಯಾಗಿ ಬೆಳೆಯಲು ಬ್ಯಾರಿ ಬರಹಗಾರರು, ಸಮಸ್ತ ಬ್ಯಾರಿಗಳು ಒಟ್ಟಾಗಿ ಶ್ರಮಿಸಬೇಕಾಗಿದೆ.

Writer - ಪ್ರೊ. ಬಿ.ಎಂ. ಇಚ್ಲಂಗೋಡು

contributor

Editor - ಪ್ರೊ. ಬಿ.ಎಂ. ಇಚ್ಲಂಗೋಡು

contributor

Similar News