×
Ad

ಜೊಕೊವಿಕ್‌ಗೆ ಹ್ಯಾಟ್ರಿಕ್ ಪ್ರಶಸ್ತಿ

Update: 2016-03-21 23:42 IST

ಇಂಡಿಯನ್ಸ್ ವೇಲ್ಸ್ ಟೆನಿಸ್ ಟೂರ್ನಿ

ಇಂಡಿಯನ್ ವೇಲ್ಸ್, ಮಾ.21: ಕೆನಡಾದ ಮಿಲಾಸ್ ರಾವೊನಿಕ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಸತತ ಮೂರನೆ ಬಾರಿ ಇಂಡಿಯನ್ಸ್ ವೇಲ್ಸ್ ಟ್ರೋಫಿಯನ್ನು ಜಯಿಸಿದರು. ಜೊಕೊವಿಕ್ ಒಟ್ಟಾರೆ ಐದನೆ ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ ಅವರು ರಾವೊನಿಕ್‌ರನ್ನು 6-2, 6-0 ಸೆಟ್‌ಗಳ ಅಂತರದಿಂದ ಮಣಿಸಿದರು. ಕ್ಯಾಲಿಫೋರ್ನಿಯಾ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೇವಲ 77 ನಿಮಿಷದಲ್ಲಿ ಪಂದ್ಯವನ್ನು ಜಯಿಸಿದ ಸಾಧನೆ ಮಾಡಿದರು.

ಜೊಕೊವಿಕ್ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ 2013ರ ನಂತರ ಒಂದೂ ಟ್ರೋಫಿಯನ್ನು ಕಳೆದುಕೊಂಡಿಲ್ಲ. ವೃತ್ತಿಜೀವನದಲ್ಲಿ 62ನೆ ಪ್ರಶಸ್ತಿ ಜಯಿಸಿರುವ ಜೊಕೊವಿಕ್ ಎಟಿಪಿ ಹಾಗೂ ಡಬ್ಲ್ಯುಟಿಎ ಹಾರ್ಡ್‌ಕೋರ್ಟ್ ಟೂರ್ನಮೆಂಟ್‌ಗಳಲ್ಲಿ ಸತತ 17ನೆ ಪಂದ್ಯದಲ್ಲಿ ಜಯ ಸಾಧಿಸಿದರು.

ಇಂಡಿಯನ್ ವೇಲ್ಸ್ ಟೂರ್ನಿಯೊಂದರಲ್ಲಿ ಐದು ಬಾರಿ ಪ್ರಶಸ್ತಿ ಜಯಿಸಿರುವುದು ನನ್ನ ಉತ್ತಮ ಸಾಧನೆಯಾಗಿದೆ. ಟೂರ್ನಿಯಿಂದ ಟೂರ್ನಿಗೆ ಪ್ರದರ್ಶನದ ಮಟ್ಟವನ್ನು ಹೆಚ್ಚಿಸಿಕೊಂಡಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಜೊಕೊವಿಕ್ ನುಡಿದರು.

28ರ ಹರೆಯದ ಜೊಕೊವಿಕ್ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ 2008 ಹಾಗೂ 2011, 2014 ಹಾಗೂ 2015ರಲ್ಲಿ ಪ್ರಶಸ್ತಿ ಜಯಿಸಿದ್ದರು.

 ಫ್ರೆಂಚ್ ಓಪನ್ ಟೂರ್ನಿ ಈ ಋತುವಿನಲ್ಲಿ ನನ್ನ ಪ್ರಮುಖ ಆದ್ಯತೆಯ ಟೂರ್ನಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಫ್ರೆಂಚ್ ಓಪನ್ ಗೆಲ್ಲುವ ಹೊಸ್ತಿಲಲ್ಲಿ ಎಡವಿದ್ದೇನೆ. ಇಂಡಿಯನ್‌ವೇಲ್ಸ್ ಟೂರ್ನಿಯು ಮೊದಲ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಲು ಅಡಿಗಲ್ಲು ಎಂದು ನಂಬಿದ್ದಾಗಿ ಜೊಕೊವಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News