×
Ad

ಸೆರೆನಾಗೆ ಶಾಕ್ ನೀಡಿದ ವಿಕ್ಟೋರಿಯ ಅಝರೆಂಕಾಗೆ ಟ್ರೋಫಿ

Update: 2016-03-21 23:44 IST

ಇಂಡಿಯನ್ ವೇಲ್ಸ್, ಮಾ.21: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು 6-4, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದ ವಿಕ್ಟೋರಿಯಾ ಅಝರೆಂಕಾ ಎರಡನೆ ಬಾರಿ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ರವಿವಾರ 88 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಅಝರೆಂಕಾ 34ರ ಹರೆಯದ ಸೆರೆನಾರನ್ನು ಮಣಿಸಿ ವೃತ್ತಿಜೀವನದಲ್ಲಿ 19ನೆ ಬಾರಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು. 15ನೆ ರ್ಯಾಂಕಿನ ಅಝರೆಂಕಾ ಅವರು ಸೆರೆನಾಗೆ ನಾಲ್ಕನೆ ಬಾರಿ ಪ್ರಶಸ್ತಿ ನಿರಾಕರಿಸಿದ ಏಕೈಕ ಆಟಗಾರ್ತಿಯಾಗಿದ್ದಾರೆ. ಸಹೋದರಿ ವೀನಸ್ ವಿಲಿಯಮ್ಸ್ ಮೂರು ಬಾರಿ ಸೆರೆನಾಗೆ ಪ್ರಶಸ್ತಿ ನಿರಾಕರಿಸಿದ್ದರು.

ಸತತ ಮೂರು ಬಾರಿ ಇಂಡಿಯನ್ ವೇಲ್ಸ್ ಟೂರ್ನಿಯನ್ನು ಜಯಿಸಿದ ಮೊದಲ ಆಟಗಾರ್ತಿ ಎನಿಸಿಕೊಳ್ಳುವ ಸೆರೆನಾರ ಕನಸನ್ನು ಅಝರೆಂಕಾ ಭಗ್ನಗೊಳಿಸಿದರು.

2012ರ ನಂತರ ಎರಡನೆ ಬಾರಿ ಇಂಡಿಯನ್ ವೇಲ್ಸ್ ಟೂರ್ನಿಯನ್ನು ಗೆದ್ದುಕೊಂಡಿರುವ ಅಝರೆಂಕಾ 1.02 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಪಡೆದರು. ರನ್ನರ್-ಅಪ್ ಸೆರೆನಾ 500,000 ಯುಎಸ್ ಡಾಲರ್ ಬಹುಮಾನ ಗೆದ್ದುಕೊಂಡರು.

ಸೆರೆನಾರನ್ನು ಮಣಿಸಿ ಪ್ರಶಸ್ತಿ ಜಯಿಸಿರುವ ಅಝರೆಂಕಾ 2014ರ ನಂತರ ಮೊದಲ ಬಾರಿ ವಿಶ್ವ ರ್ಯಾಂಕಿಂಗ್‌ನಲ್ಲಿ 8ನೆ ಸ್ಥಾನಕ್ಕೆ ಮರಳಿದರು.

ಐಸಿಸಿ ರ್ಯಾಂಕಿಂಗ್: ವಿಕ್ಟೋರಿಯ ಅಝರೆಂಕಾಗೆ ಭಡ್ತಿ

ಝೂರಿಕ್, ಮಾ.21: ಇಂಡಿಯನ್ ವೇಲ್ಸ್ ಟೂರ್ನಿಯ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು ಮಣಿಸಿ ಪ್ರಶಸ್ತಿ ಜಯಿಸಿರುವ ಬೆಲಾರಿಸ್‌ಸ ವಿಕ್ಟೋರಿಯಾ ಅಝರೆಂಕಾ 2 ವರ್ಷಗಳ ನಂತರ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ವಿಕ್ಟೋರಿಯಾ ಕಳೆದ 2 ವರ್ಷಗಳಲ್ಲಿ ಹೆಚ್ಚು ಟೂರ್ನಿಗಳಲ್ಲಿ ಭಾಗವಹಿಸಿಲ್ಲ. ರ್ಯಾಂಕಿಂಗ್‌ನಲ್ಲಿ ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾ ಎರಡನೆ ಸ್ಥಾನಕ್ಕೆ ಮರಳಿದ್ದಾರೆ.

ಡಬ್ಲುಟಿಎ ರ್ಯಾಂಕಿಂಗ್: 1. ಸೆರೆನಾ ವಿಲಿಯಮ್ಸ್(ಅಮೆರಿಕ), 2.ಅಗ್ನೆಸ್ಕಾ ರಾಂಡ್ವಾಂಸ್ಕಾ(ಪೊಲೆಂಡ್), 3.ಆ್ಯಂಜೆಲಿಕ್ ಕರ್ಬರ್(ಜರ್ಮನಿ), 4.ಗಾರ್ಬೈನ್ ಮುಗುರುಝ(ಸ್ಪೇನ್), 5.ಸಿಮೊನಾ ಹಾಲೆಪ್(ರೊಮಾನಿಯ), 6. ಕಾರ್ಲ ಸುಯರೆಝ್, 7. ಪೆಟ್ರಾ ಕ್ವಿಟೋವಾ(ಝೆಕ್), 8. ವಿಕ್ಟೋರಿಯ ಅಝರೆಂಕಾ(ಬೆಲಾರಿಸ್), 9. ರಾಬರ್ಟ ವಿನ್ಸಿ(ಇಟಲಿ), 10. ಬೆಲಿಂಡ ಬೆನಿಕ್(ಸ್ವೀಡನ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News