ರಾಮಮನೋಹರ ಲೋಹಿಯಾ: ಒಂದು ನೆನಪು

Update: 2016-03-22 17:29 GMT

ಕರ್ನಾಟಕಕ್ಕೂ ರಾಮ ಮನೋಹರ ಲೋಹಿಯಾ ಅವರಿಗೂ ಆತ್ಮೀಯ ಸಂಬಂಧ ಏರ್ಪಟ್ಟ ಒಂದು ಮಹತ್ವದ ಪ್ರಸಂಗ ನಡೆದದ್ದು ಸಾಗರ ತಾಲ್ಲೂಕಿನ ಸಣ್ಣ ಹಳ್ಳಿ ಕಾಗೋಡು ಎಂಬಲ್ಲಾಯಿತು.

 ಆ ಊರಿನಲ್ಲಿ ಒಬ್ಬರೇ ಒಬ್ಬರು ಜಮೀನುದಾರರು. ಉಳಿದವರೆಲ್ಲ ಗೇಣಿಕಾರರು, ಒಕ್ಕಲುಗಳು. ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ತುಂಬ ಶೋಚನೀಯವಾಗಿತ್ತು. ರೈತರು ಭೂ ಒಡೆಯರ ಎದುರು ನೆಟ್ಟಗೆ ನಿಲ್ಲಲೂ ಅಂಜುತ್ತಿದ್ದರು. ಮೊಣಕಾಲಿನಿಂದ ಮೇಲಕ್ಕೆ ಧೋತರ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನ ತನಕ ಉಡುವಂತಿಲ್ಲ. ಒಡೆಯರ ಮನೆಯಲ್ಲಿ ಬಿಟ್ಟಿ ದುಡಿತ, ವಿದ್ಯೆಯ ಗಂಧವೇ ಇಲ್ಲ. ಇವೆಲ್ಲ ವಿಧಿ ವಿಲಾಸ ಎಂದು ನಂಬಿದ್ದ ಮೂಕ ಜನ.

ಸ್ವಾತಂತ್ರದ ಬಳಿಕ ಹೊಸ ಗಾಳಿ ಮಲೆನಾಡಿಗೆ ಬೀಸಿತು. ರೈತರು ಎಚ್ಚರಗೊಂಡರು. ತಾವೂ ಮನುಷ್ಯರು ಎಂಬುದನ್ನು ಕಂಡುಕೊಂಡರು. ಸಂಘ ಕಟ್ಟಿದರು. ಇದು ಭೂ ಒಡೆಯರಿಗೆ ಹಿಡಿಸಲಿಲ್ಲ. ಬಹು ಕಾಲದಿಂದ ತುಳಿದಿಟ್ಟಿದ್ದ ಜನ ತಿರುಗಿಬಿದ್ದರೆ ಹೇಗೆ? ಒಡೆಯರನ್ನು ಭಯ ಆವರಿಸಿತು. ಗೇಣಿದಾರರನ್ನು ಕಾಗೋಡಿನ ಜಮೀನುದಾರರು ಭೂಮಿಯಿಂದ ಬಿಡಿಸಿದರು. 1951ರಲ್ಲಿ ರೈತರು ಕೂಡಿ ಯೋಚಿಸಿದರು. ಅನ್ಯಾಯವನ್ನು ಎದುರಿಸಲೇಬೇಕೆಂದು ನಿಶ್ಚಯಿಸಿದರು. ರೈತ ಸಂಘ ಮತ್ತು ಕರ್ನಾಟಕದ ಸಮಾಜವಾದೀ ಪಕ್ಷ ಈ ಅನ್ಯಾಯದ ವಿರುದ್ಧ ಸತ್ಯಾಗ್ರಹ ಹೂಡಿದವು. ಅನೇಕ ದಿನ ರೈತರು ಗುಂಪುಗುಂಪಾಗಿ ಗದ್ದೆಗೆ ಇಳಿದು ತಮ್ಮ ಹ್ಕಕಿನ ಸ್ಥಾಪನೆಗಾಗಿ ಹೋರಾಟ ಹೂಡಿದರು. ಸರಕಾರ ಭೂ ಒಡೆಯರ ಪಕ್ಷ ವಹಿಸಿತು. ರೈತರು ಸಮಾಜವಾದಿಗಳ ನೇತೃತ್ವದಲ್ಲಿ ನೂರುಗಟ್ಟಲೆ ಸಂಖ್ಯೆಯಲ್ಲಿ ಸಾಗರ ಮತ್ತು ಶಿವಮೊಗ್ಗಗಳ ಸೆರೆಮನೆಗಳನ್ನು ತುಂಬಿದರು.

1951ರ ಜುಲೈ ತಿಂಗಳಲ್ಲಿ ಡಾ. ಲೋಹಿಯಾ ಅವರಿಗೆ ಈ ಸುದ್ದಿ ತಿಳಿಯಿತು. ಕನ್ನಡ ನಾಡಿಗೆ ಅವರು ಧಾವಿಸಿ ಬಂದರು. ಬೆಂಗಳೂರಿನಿಂದ ನೆಟ್ಟಗೆ ಇಲ್ಲಿನ ನಾಯಕರೊಂದಿಗೆ ಸಾಗರಕ್ಕೆ ತೆರಳಿದರು; ಅಲ್ಲಿಂದ ಕಾಗೋಡು ಗ್ರಾಮಕ್ಕೆ. ಒಳ್ಳೆಯ ಮಳೆಗಾಲ; ಒಂದೇ ಸಮನೆ ಮಳೆ ಬೀಳುತ್ತಿತ್ತು. ಜುಲೈ 12ರ ಮಧ್ಯಾಹ್ನ. ಸ್ವಲ್ಪ ಹೊಳವಾಗಿತ್ತು. ಕಾಗೋಡಿನ ರೈತರ ನೇತೃತ್ವ ವಹಿಸಿ ಗದ್ದೆಗೆ ಇಳಿದು ಸಮಾಜವಾದೀ ಪಕ್ಷದ ಧ್ವಜ ಹಿಡಿದು ಲೋಹಿಯಾ ಸತ್ಯಾಗ್ರಹ ನಡೆಸಿದರು. ಆ ಊರಿನಲ್ಲಿ ಮೆರವಣಿಗೆ ನಡೆದಾಗ ಅತ್ಯಂತ ಸ್ತಬ್ಧ ವಾತಾವರಣ. ಸತ್ಯಾಗ್ರಹ ಮುಗಿಸಿ ಸಾಗರದ ರೈಲ್ವೆ ನಿಲ್ದಾಣದ ವಿಶ್ರಾಂತಿ ಗೃಹಕ್ಕೆ ಲೋಹಿಯಾ ಬಂದರು. ಅಂದು ರಾತ್ರಿ ಸುಮಾರು ಹನ್ನೆರಡು ಗಂಟೆಯ ಸಮಯ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಲೋಹಿಯಾ ಅವರನ್ನು ಬಂಧಿಸಿದರು.

ಸಾಗರದ ಪೊಲೀಸ್ ಲಾಕಪ್‌ನಲ್ಲಿ ಅಂದು ಇಡೀ ರಾತ್ರಿ ಇತರ ಬಂಧಿಗಳೊಡನೆ ಕುಳಿತೇ ಸಮಯ ಕಳೆದರು ಲೋಹಿಯಾ. ಮರುದಿನ ಶಿವಮೊಗ್ಗ ಜೈಲಿಗೆ ಅವರನ್ನೂ ಇತರ ನಾಯಕರನ್ನೂ ಒಯ್ದರು. ಅಲ್ಲಿ ಸಾಕಷ್ಟು ಮಂದಿ ಸತ್ಯಾಗ್ರಹಿಗಳು ತುಂಬಿದ್ದರು. ಅಂದು ಸಂಜೆಯೇ ಲೋಹಿಯಾ ಒಬ್ಬರನ್ನೇ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸರಕಾರಿ ಅತಿಥಿ ಗೃಹದಲ್ಲಿ ಬಂಧನದಲ್ಲಿಟ್ಟರು. ಅನಂತರ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದಾಗ ಲೋಹಿಯಾ ಅವರ ಬಿಡುಗಡೆ ಆಯಿತು. ಶಿವಮೊಗ್ಗ್ಗ ಜೈಲಿನಲ್ಲಿ ಸತ್ಯಾಗ್ರಹಿಗಳಿಗೆ ಸಾಕಷ್ಟು ಊಟ ಕೊಡುತ್ತಿರಲಿಲ್ಲ. ಸರಕಾರ ಕೊಡುತ್ತಿದ್ದ ಆಹಾರ ಪದಾರ್ಥ ಒಂದು ಹೊತ್ತಿಗೆ ಮಾತ್ರ ಸಾಲುತ್ತಿತ್ತು. ಇನ್ನೊಂದು ಹೊತ್ತು ಹೊರಗಿನಿಂದ ಹಿತೈಷಿಗಳು ಕಳಿಸಿದ ತಿಂಡಿ ತೀರ್ಥಗಳಿಂದ ಸತ್ಯಾಗ್ರಹಿಗಳು ತೃಪ್ತರಾಗುತ್ತಿದ್ದರು. ಲೋಹಿಯಾ ಅವರಿಗೆ ಈ ಸ್ಥಿತಿ ಕಂಡು ಬಹು ಮರುಕವಾಯಿತು. ಆದರೆ ಅವರ ಬಳಿ ಹಣ ಇರಲಿಲ್ಲ. ಅವರ ಕಿಸೆಯಲ್ಲಿದ್ದ ಹಣದ ಚೀಲದಲ್ಲಿ ಮೂವತ್ತೆರಡು ರೂಪಾಯಿಗಳಿದ್ದವು. ತಮ್ಮನ್ನು ಬೆಂಗಳೂರಿಗೆ ಒಯ್ಯಲು ಪೊಲೀಸ್ ಅಧಿಕಾರಿಗಳು ಬಂದಾಗ ಆ ಹಣದ ಚೀಲವನ್ನೇ ತಮ್ಮೆಡನೆ ಸೆರೆಯಲ್ಲಿದ್ದವರ ಕೈಯಲ್ಲಿ ಇಟ್ಟರು. ಇದರಿಂದ ಎಷ್ಟು ತಿಂಡಿ ಬರುತ್ತದೋ ಅದನ್ನೆಲ್ಲ ತರಿಸಿ ಎಲ್ಲರಿಗೂ ಕೊಡು ಎಂದು ಹೇಳಿದರು. ಅವರ ಗೆಳೆಯರು ಬೇಡವೆಂದರೂ ಅವರು ಕೇಳಲೇ ಇಲ್ಲ.

ಕರ್ನಾಟಕದ ರೈತರ ಹೋರಾಟದಲ್ಲಿ ಮಾತ್ರವೇ ಲೋಹಿಯಾ ಭಾಗವಹಿಸಿದರೆಂದಲ್ಲ, ದೇಶದ ಎಲ್ಲ ಕಡೆಯ ದೀನದಲಿತರ ಹೋರಾಟಗಳಲ್ಲೆಲ್ಲ ಅವರು ಭಾಗವಹಿಸಿದರು. ಅನ್ಯಾಯದ ವಿರುದ್ಧ ಶ್ರಮಜೀವಿಗಳ ಎಲ್ಲ ಚಳವಳಿಗಳಲ್ಲೂ ಮುಂದಾಳಾಗಿ ನಿಲ್ಲುತ್ತಿದ್ದರು. ಶ್ರೀಸಾಮಾನ್ಯರ ವಿಷಯದಲ್ಲಿ ಮರುಕವಷ್ಟೇ ಅಲ್ಲ, ಅಪಾರ ಗೌರವ.

1952ರಲ್ಲಿ ಮೊಟ್ಟಮೊದಲ ಬಾರಿಗೆ ದೇಶದಾದ್ಯಂತ ಮಹಾಚುನಾವಣೆ ನಡೆಯಿತು. ಎಲ್ಲ ಕಡೆಯೂ ಸಮಾಜವಾದೀ ಪಕ್ಷ ತನ್ನ ಹುರಿಯಾಳುಗಳನ್ನು ನಿಲ್ಲಿಸಿತ್ತು. ಡಾ.ಲೋಹಿಯಾ ಸ್ವತಃ ಸ್ಪರ್ಧಿಸಲಿಲ್ಲ. ಎಲ್ಲ ರಾಜ್ಯಗಳಲ್ಲೂ ಸಂಚರಿಸಿ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಆಗ ಮೈಸೂರು ರಾಜ್ಯಕ್ಕೂ ಬಂದಿದ್ದರು. ಅನೇಕ ಸಭೆಗಳನ್ನು ಕುರಿತು ಭಾಷಣ ಮಾಡಿದರು. ಆ ಚುನಾವಣೆಯಲ್ಲಿ ಸಮಾಜವಾದಿಗಳಿಗೆ ಅಷ್ಟಾಗಿ ಗೆಲುವು ದೊರೆಯಲಿಲ್ಲ.

ಅನಂತರ ಒಂದು ವರ್ಷದೊಳಗಾಗಿ ಸಮಾಜವಾದೀ ಪಕ್ಷ ಹಾಗೂ ಆಚಾರ್ಯ ಕೃಪಲಾನಿಯವರು ಸ್ಥಾಪಿಸಿದ್ದ ಕಿಸಾನ್ ಮಜ್ದೂರ್ ಪ್ರಜಾಪಕ್ಷಗಳೆರಡೂ ವಿಲೀನಗೊಂಡವು. ಹೊಸ ಪಕ್ಷಕ್ಕೆ ಪ್ರಜಾ ಸಮಾಜವಾದೀ ಪಕ್ಷ ಎಂದು ಹೆಸರಿಸಲಾಯಿತು. ಅದಕ್ಕೆ ಆಚಾರ್ಯ ಕೃಪಲಾನಿಯವರು ಅಧ್ಯಕ್ಷರಾದರು. ಡಾ. ರಾಮ ಮನೋಹರ ಲೋಹಿಯಾ ಪ್ರಧಾನ ಕಾರ್ಯದರ್ಶಿ ಆದರು. ಹಿಂದೆ ಆಚಾರ್ಯ ಕೃಪಲಾನಿ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಲೋಹಿಯಾ ಕಾಂಗ್ರೆಸ್ಸಿನ ವಿದೇಶಾಂಗ ವಿಭಾಗದ ಮುಖ್ಯಸ್ಥರಾಗಿದ್ದರು. ಆಗ ಅವರು ಕೃಪಲಾನಿಯವರ ಕುಟುಂಬದ ಒಬ್ಬ ಸದಸ್ಯರೇ ಆಗಿದ್ದರು. ಅವರೊಂದಿಗೇ ವಾಸ. ಹೀಗಾಗಿ ಕೃಪಲಾನಿಯವರಿಗೆ ಲೋಹಿಯಾ ಅವರ ಬಗೆಗೆ ಅಪಾರ ವಾತ್ಸಲ್ಯ.

The Cast system, Marks Gandhi and Socialism, Guilty men of India's partision, Interval during Politics, Language, Rupees 25,000/&, A Day, Note and Comments ಮ್ಯಾನ್ ಕೈಂಡ್ (ಇಂಗ್ಲೀಷ್), ಚೌಕಂಭಾ (ಹಿಂದಿ) ಲೋಹಿಯಾ ಆವರು ಸಂಪಾದಕೀಯ ನಡೆಸಿದ ಪತ್ರಿಕೆಗಳು. ಲೋಹಿಯಾ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಗಳು.

ಸಮಜವಾದಿ ಅಂದೊಳನ್ ಕ ಇತಿಹಾಸ್, ಹಿಂದು ಮುಸಲ್ಮಾನ್, ಅನ್ನ ಸಮಸ್ಯ, ಆಝಾದ್ ಹಿಂದೂಸ್ಥಾನ್ ಕ ನಯೀ ರುಜುಹಾನ್ ಮುಂತಾದವು ಲೋಹಿಯಾರ ಹಿಂದೀ ಭಾಷೆಯ ಕೃತಿಗಳು.

ರಾಮ ಮನೋಹರ ಲೋಹಿಯಾರವರು, ಅವಿವಾಹಿತರಾಗಿದ್ದರು. 1967ರ ಅಕ್ಕೋಬರ್ 12ರಂದು ಕಾಲವಶರಾದರು.

ಈ ಮಹಾನ್ ದೇಶಭಕ್ತ, ವಿದ್ವಾಂಸ, ಮಾನವೀಯ ಚಿಂತಕನಿಗೆ ನಮ್ಮ ಮನಗಳು.

ಆಧಾರ: ಖಾದ್ರಿ ಶಾಮಣ್ಣನವರು ರಾಷ್ಟ್ರೋತ್ಥಾನ ಪ್ರಕಟಣೆಗೆ ಬರೆದ ಲೇಖನ, ಹರಿಹರ ಪ್ರಿಯರ ’ಪೂರ್ವ ಪಶ್ಚಿಮ ಅಪೂರ್ವರು’, ಕಣಜ ಮತ್ತು ವಿಕಿಪೀಡಿಯಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News