ರಿಯೋ ಒಲಿಂಪಿಕ್ಸ್ ಬಳಿಕ ನಿವೃತ್ತಿ: ಬೋಲ್ಟ್
ಜಮೈಕಾ, ಮಾ.22: ರಿಯೋ ಡಿ ಜನೈರೊದಲ್ಲಿ ಈ ವರ್ಷ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ನ ಬಳಿಕ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಓಟದ ರಾಜ ಖ್ಯಾತಿಯ ಉಸೇನ್ ಬೋಲ್ಟ್ ದೃಢಪಡಿಸಿದ್ದಾರೆ.
ಆರು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿ ಹೊಸ ದಾಖಲೆ ನಿರ್ಮಿಸಿರುವ ಬೋಲ್ಟ್ ತನ್ನ ಕೋಚ್ ಗ್ಲೆನ ಮಿಲ್ಸ್ ಸಲಹೆ ಮೇರೆಗೆ 2020ರ ಟೋಕಿಯೋ ಗೇಮ್ಸ್ ತನಕ ವೃತ್ತಿಜೀವನದಲ್ಲಿ ಮುಂದುವರಿಯಲಿದ್ದಾರೆ ಎಂದು ಜನವರಿಯಲ್ಲಿ ವರದಿಯಾಗಿತ್ತು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 100 ಮೀ., 200 ಮೀ. ಹಾಗೂ 4-100 ಮೀ. ಓಟದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ಬೋಲ್ಟ್ 2012ರ ಲಂಡನ್ ಗೇಮ್ಸ್‌ನಲ್ಲಿ ಇದೇ ಪ್ರದರ್ಶನವನ್ನು ಪುನರಾವರ್ತಿಸಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ಬ್ರೆಝಿಲ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲೂ ಹ್ಯಾಟ್ರಿಕ್ ಚಿನ್ನ ಜಯಿಸುವ ವಿಶ್ವಾಸದಲ್ಲಿದ್ದಾರೆ.
ರಿಯೋ ಒಲಿಂಪಿಕ್ಸ್ ನನ್ನ ಪಾಲಿಗೆ ಖಂಡಿತವಾಗಿಯೂ ಕೊನೆಯ ಒಲಿಂಪಿಕ್ಸ್ ಎನಿಸಿಕೊಳ್ಳಲಿದೆ. ಇನ್ನೂ ನಾಲ್ಕು ವರ್ಷಗಳ ಕಾಲ ವೃತ್ತಿಜೀವನದಲ್ಲಿ ಮುಂದುವರಿಯುವುದು ಕಷ್ಟ. ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಮೂರು ಚಿನ್ನದ ಪದಕವನ್ನು ಜಯಿಸುವುದು ನನ್ನ ದೊಡ್ಡ ಕನಸು ಹಾಗೂ ಪ್ರಮುಖ ಗುರಿಯಾಗಿದೆ. ಆ ನಿಟ್ಟಿನಲ್ಲಿ ನಾನು ಗಮನ ನೀಡುತ್ತಿದ್ದೇನೆ ಎಂದು 29ರ ಹರೆಯದ ಬೋಲ್ಟ್ ಹೇಳಿದ್ದಾರೆ.