×
Ad

ಒತ್ತಡಕ್ಕೆ ಸಿಲುಕಿರುವ ಟೀಮ್ ಇಂಡಿಯಾ

Update: 2016-03-22 23:53 IST

ಬೆಂಗಳೂರು, ಮಾ.22: ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಗಳಿಸಿದರೂ, ಇನ್ನೂ ಒತ್ತಡದಲ್ಲಿರುವ ಭಾರತ ಬುಧವಾರ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-10 ಹಂತದ ಪಂದ್ಯದಲ್ಲಿ ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ.
’ಬಿ’ ಗುಂಪಿನಲ್ಲಿ ಭಾರತ ಒಂದು ಗೆಲುವಿನೊಂದಿಗೆ ಆಸ್ಟ್ರೇಲಿಯ ಮತ್ತು ಪಾಕಿಸ್ತಾನದೊಂದಿಗೆ ಸ್ಪರ್ಧೆ ಎದುರಿಸುವಂತಾಗಿದೆ.
ಭಾರತ ತಂಡ ಸೆಮಿಫೈನಲ್ ತಲುಪಲು ಇನ್ನುಳಿದಿರುವ ಬಾಂಗ್ಲಾ ಮತ್ತು ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಬೇಕಾಗಿದೆ.ಬಾಂಗ್ಲಾ ವಿರುದ್ಧ ಸೋತರೆ ಭಾರತದ ಸೆಮಿಫೈನಲ್ ಕನಸಿಗೆ ಧಕ್ಕೆ ಉಂಟಾಗಲಿದೆ.
 ಬಾಂಗ್ಲಾ ಸೋತರೆ ಅದರ ಅಭಿಯಾನ ಕೊನೆಗೊಳ್ಳುತ್ತದೆ. ನ್ಯೂಝಿಲೆಂಡ್ 3 ಪಂದ್ಯಗಳಲ್ಲಿ ಜಯಿಸಿ ಅಗ್ರಸ್ಥಾನದಲ್ಲಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಜಯಿಸಿದರೆ ಬಾಂಗ್ಲಾ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದಂತಾಗುತ್ತದೆ.
ಸಂಶಯಾಸ್ಪದ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ ತಸ್ಕಿನ್ ಅಹ್ಮದ್ ಮತ್ತು ಅರಾಫತ್ ಸನ್ನಿ ತಂಡದಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ಸಮಸ್ಯೆ ಎದುರಿಸುವಂತಾಗಿದೆ. ಇವರ ಬದಲಿಗೆ ಬೇರೆ ಆಟಗಾರರನ್ನು ನಾಯಕ ಮಶ್ರಾಫೆ ಮುರ್ತಝ ಕಣಕ್ಕಿಳಿಸಬೇಕಾಗಿದೆ.
ತಂಡದ ಸಮಾಚಾರ :ಅಜಿಂಕ್ಯ ರಹಾನೆ ಸೋಮವಾರ ಸುಮಾರು ಎರಡು ಗಂಟೆಗಳ ಅಭ್ಯಾಸ ನಡೆಸಿದರು. ಆದರೆ ಅವರಿಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಬ್ಯಾಟಿಂಗ್‌ನಲ್ಲಿ ಸುರೇಶ್ ರೈನಾ ಫಾರ್ಮ್ ಕಳೆದುಕೊಂಡಿದ್ದರೂ ಅವರ ಅಫ್ ಸ್ಪಿನ್ ಭಾರತಕ್ಕೆ ನಿರ್ಣಾಯಕ ಎನಿಸಿಕೊಳ್ಳಲಿದೆ.ಶಾಕಿಬ್ ಅಲ್ ಹಸನ್ ಅವರು ತಮೀಮ್ ಇಕ್ಬಾಲ್‌ರ ಫಿಟ್‌ನೆಸ್ ಬಗ್ಗೆ ಏನನ್ನ್ನೂ ಹೇಳಿಲ್ಲ. ಹೀಗಾಗಿ ಅವರು ಅಗ್ರಸರದಿಯಲ್ಲಿ ಆಡುವುದನ್ನು ನಿರೀಕ್ಷಿಸಲಾಗಿದೆ. ಮಹ್ಮೂದುಲ್ಲಾ ನಂ.5 ಅಥವಾ 6ನೆ ಕ್ರಮಾಂಕದಲ್ಲಿ ಆಡಲಿದ್ದಾರೆ.
 ಸಂಭಾವ್ಯ ತಂಡ

ಭಾರತ:ಮಹೇಂದ್ರ ಸಿಂಗ್ ಧೋನಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ , ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್.ಅಶ್ವಿನ್, ಆಶೀಷ್ ನೆಹ್ರಾ, ಜಸ್‌ಪ್ರೀತ್ ಬುಮ್ರಾ.ಬಾಂಗ್ಲಾದೇಶ: ಮಶ್ರಾಫೆ ಮುರ್ತಝ(ನಾಯಕ), ಮುಹಮ್ಮದ್ ಮಿಥುನ್/ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಬ್ಬೀರ್ ರಹ್ಮಾನ್, ಶಾಕಿಬ್ ಅಲ್ ಹಸನ್, ಶುವಾಗತ ಹೊಮ್, ಮಹ್ಮೂದುಲ್ಲಾ, ಮುಶ್ಫಿಕುರ್ರರಹೀಮ್ (ವಿಕೆಟ್ ಕೀಪರ್), ಸಕ್ಲೈನ್ ಸಾಜಿಬ್, ಅಲ್ ಅಮೀನ್ ಹುಸೈನ್, ಮುಸ್ತಾಫಿಝರಹ್ಮಾನ್
.

2016ರಲ್ಲಿ ಸೋಲು -ಗೆಲುವು*

ಭಾರತ ಆಡಿರುವ 13 ಟ್ವೆಂಟಿ-20 ಪಂದ್ಯಗಳಲ್ಲಿ 11ರಲ್ಲಿ ಜಯಸಿದೆ. 2ರಲ್ಲಿ ಸೋಲು ಅನುಭವಿಸಿದೆ.
*ಬಾಂಗ್ಲಾದೇಶ ಆಡಿರುವ 14 ಟ್ವೆಂಟಿ-20 ಪಂದ್ಯಗಳ ಪೈಕಿ 7ರಲ್ಲಿ ಜಯಿಸಿದೆ. 6ರಲ್ಲಿ ಸೋತಿದೆ. 1 ಪಂದ್ಯ ರದ್ದಾಗಿದೆ.
 

ಅಂಕಿ-ಅಂಶ
*ಅಲ್ ಅಮೀನ್ ಹುಸೈನ್ ಭಾರತದ ವಿರುದ್ಧ ಆಡಿರುವ 3 ಟ್ವೆಂಟಿ-20 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದಾರೆ.
*ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಈ ವರ್ಷ ಐದು ಅರ್ಧಶತಕ ದಾಖಲಿಸಿದ್ದಾರೆ.

ಪಿಚ್ ಪರಿಸ್ಥಿತಿ
*ಪಿಚ್ ಸ್ಪಿನ್ನರ್‌ಗಳ ಸ್ನೇಹಿಯಾಗಿದೆ. ಸೋಮವಾರ ಆಸ್ಟ್ರೇಲಿಯದ ಯುವ ಲೆಗ್‌ಸ್ಪಿನ್ನರ್ ಆ್ಯಡಮ್ ಝಂಪಾ 3 ವಿಕೆಟ್ ಪಡೆದಿದ್ದಾರೆ.

‘‘ ನಮ್ಮ ಮನಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಬದಲಾಗಿದೆ. ಪಂದ್ಯಗಳಲ್ಲಿ ತವರಿನಲ್ಲಿ ಆಡುವಾಗ ಚೆನ್ನಾಗಿ ಆಡುತ್ತೇವೆ. ಆದರೆ ವಿಶ್ವಕಪ್‌ನಲ್ಲಿ ಎಲ್ಲ ಕಡೆ ಚೆನ್ನಾಗಿ ಆಡುತ್ತೇವೆ-ಶಾಕಿಬ್ ಅಲ್ ಹಸನ್.

‘‘ ನಾನು ನನ್ನ ಹೊಣೆಗಾರಿಕೆ ಮತ್ತು ಪಾತ್ರವನ್ನು ಗೌರವಿಸುತ್ತೇನೆ. ಮುಂದೆಯೂ ಚೆನ್ನಾಗಿ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿರುವೆ-ಆಶೀಷ್ ನೆಹ್ರಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News