×
Ad

ಬಾಂಗ್ಲಾ ವಿರುದ್ಧ ಭಾರತಕ್ಕೆ 1 ರನ್‌ ರೋಮಾಂಚಕ ಗೆಲುವು

Update: 2016-03-23 19:06 IST

ಬೆಂಗಳೂರು, ಮಾ.23: ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಇಂದು ಬಾಂಗ್ಲಾ ವಿರುದ್ಧ ಭಾರತ 1 ರನ್‌ಗಳ ರೋಚಕ ಜಯ ಗಳಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 147 ರನ್ ಮಾಡಬೇಕಿದ್ದ ಬಾಂಗ್ಲಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಾಂಗ್ಲಾ ತಂಡದ ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ (35), ಶಬ್ಬೀರ್ ರಹ್ಮಾನ್(26), ಶಾಕಿಬ್ ಅಲ್ ಹಸನ್(22), ಸೌಮ್ಯ ಸರ್ಕಾರ್ (21), ಮಹ್ಮೂದುಲ್ಲಾ 18ರನ್ ಮುಶ್ಪಿಕುರ್ರಹೀಂ 11 ರನ್ ಗಳಿಸಿದರು.
ಭಾರತ 146/7: ಭಾರತ ನಿಗದಿತ 20 ಓವರ್‌ಗಳಲ್ಲಿ 7ವಿಕೆಟ್ ನಷ್ಟದಲ್ಲಿ 146ರನ್ ಗಳಿಸಿತ್ತು.
 ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ದೊಡ್ಡ ಮೊತ್ತದ ಸವಾಲನ್ನು ಸೇರಿಸುವ ಮೂಲಕ ರನ್‌ರೇಟ್ ಏರಿಕೆಯ ಕಡೆಗೆ ಗಮನ ಹರಿಸಬೇಕಿದ್ದರೂ ಆರಂಭದಲ್ಲೇ ಈ ಪ್ರಯತ್ನ ವಿಫಲಗೊಂಡಿತು.
ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಪವರ್‌ಪ್ಲೇಯಲ್ಲಿ ಎಚ್ಚರಿಕೆಯಿಂದಲೇ ಆಡಿದರು. ಐದು ಓವರ್‌ಗಳ ಮುಕ್ತಾಯದ ಹೊತ್ತಿಗೆ ಇವರ ಜೊತೆಯಾಟದ ನೆರವಿನಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ 27ರನ್‌ಗಳಿಸಿತ್ತು.
   
ಆರನೆ ಓವರ್‌ನಲ್ಲಿ ಮುಶ್ಪಿಕುರ್ರಹೀಂ ಅವರ ಐದು ಎಸೆತಗಳಲ್ಲಿ ಶರ್ಮ ಮತ್ತು ಧವನ್ ತಲಾ 1 ಸಿಕ್ಸರ್ ಸಿಡಿಸಿ 15 ರನ್ ಕಬಳಿಸಿದರು. ಆದರೆ ಅದೇ ಓವರ್‌ನ ಕೊನೆಯಲ್ಲಿ ಶರ್ಮ ಅವರು ಶಬ್ಬೀರ್ ರಹ್ಮಾನ್‌ಗೆ ಕ್ಯಾಚ್ ನೀಡುವುದರೊಂದಿಗೆ 18 ರನ್ ಗಳಿಸಿ ಪೆವಿಲಿಯನ್ ಸೇರಿದರು. ಏಳನೆ ಓವರ್‌ನ ಕೊನೆಯ ಎಸೆತದಲ್ಲಿ ಭಾರತ ಇನ್ನೊಂದು ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್(23) ಅವರನ್ನು ಶಾಕಿಬ್ ಅಲ್ ಹಸನ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. 50ರನ್: ಕೊಹ್ಲಿ ಮತ್ತು ರೈನಾ ಮೂರನೆ ವಿಕೆಟ್‌ಗೆ 6.4 ಓವರ್‌ಗಳಲ್ಲಿ 50 ರನ್ ಜಮೆ ಮಾಡಿದರು. ಫಾರ್ಮ್ ಕಳೆದುಕೊಂಡಿದ್ದ ಸುರೇಶ್ ರೈನಾ ಇಂದಿನ ಪಂದ್ಯದಲ್ಲಿ ತನ್ನಿಂದ ಸಾಧ್ಯವಿರುವ ಪ್ರಯತ್ನ ನಡೆಸಿದರು. 14ನೆ ಓವರ್‌ನ ಮುಕ್ತಾಯದ ವೇಳೆ ಭಾರತ ಇನ್ನೊಂದು ವಿಕೆಟ್ ಕಳೆದುಕೊಂಡಿತು.
 ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಕಡೆಗೆ ಗಮನ ಹರಿಸಿದ ಬೆನ್ನಲ್ಲೇ ತನ್ನ ವಿಕೆಟ್‌ನ್ನು ಕೈ ಚೆಲ್ಲಿದರು. ಕೊಹ್ಲಿ 24 ಎಸೆತಗಳಲ್ಲಿ 1 ಸಿಕ್ಸರ್ ಇರುವ 24 ರನ್ ಗಳಿಸಿ ಶುವಾಗತ ಹೊಮ್ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು.

 ಹಾರ್ದಿಕ್ ಪಾಂಡ್ಯ ಕ್ರೀಸ್‌ಗೆ ಆಗಮಿಸಿ ಸ್ಫೋಟಕ ಬ್ಯಾಟಿಂಗ್ ಕಡೆಗೆ ಒತ್ತು ನೀಡಿದರು. ಆದರೆ ಪಾಂಡ್ಯ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 15.1ನೆ ಓವರ್‌ನಲ್ಲಿ ಅಲ್ ಅಮೀನ್ ಹುಸೈನ್ ಅವರು ಸುರೇಶ್ ರೈನಾ (30) ಮತ್ತು 15.2ನೆ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ(15) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
  ಮುಂದೆ ಕ್ರೀಸ್‌ಗೆ ಆಗಮಿಸಿದ ಯುವರಾಜ್ ಸಿಂಗ್ ಕಳಪೆ ಪ್ರದರ್ಶನ ನೀಡಿ ವಿಕೆಟ್ ಒಪ್ಪಿಸಿದರು. ಯುವರಾಜ್ 6 ಎಸೆತಗಳಲ್ಲಿ 3 ರನ್ ಗಳಿಸಿದರು. ಯುವರಾಜ್ ಮತ್ತು ಮಹೇಂದ್ರ ಸಿಂಗ್ ಧೋನಿ 6ನೆ ವಿಕೆಟ್‌ಗೆ 1.3 ಓವರ್‌ಗಳಲ್ಲಿ 5 ರನ್ ಕೊಡುಗೆ ನೀಡಿದರು.

 ರವೀಂದ್ರ ಜಡೇಜ ಮತ್ತು ಧೋನಿ ಏಳನೆ ವಿಕೆಟ್‌ಗೆ 20 ರನ್ ಸೇರಿಸಿದರು. ಜಡೇಜ 12 ರನ್ ಗಳಿಸಿ ಔಟಾದರು. ಧೋನಿ ಔಟಾಗದೆ 13 ರನ್ ರನ್ ಮತ್ತು ರವಿಚಂದ್ರನ್ ಅಶ್ವಿನ್ ಔಟಾಗದೆ 5 ರನ್ ಗಳಿಸಿದರು.
ಬಾಂಗ್ಲಾ ತಂಡದ ಅಲ್ ಅಮೀನ್ ಹುಸೈನ್(37ಕ್ಕೆ 2), ಮತ್ತು ಮುಸ್ತಾಫಿಝುರ್ರ ಹ್ಮಾನ್(34ಕ್ಕೆ 2) ತಲಾ 2 ವಿಕೆಟ್, ಶುವಾಗತ ಹೊಮ್, ಶಾಕಿಬ್ ಅಲ್ ಹಸನ್ ಮತ್ತು ಮಹ್ಮೂದುಲ್ಲಾ ತಲಾ 1 ವಿಕೆಟ್ ಗಿಟ್ಟಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News