ಭಾರತ-ಬಾಂಗ್ಲಾದೇಶ ವಿಶ್ವಕಪ್ ಪಂದ್ಯದ ಅಂಕಿ-ಅಂಶ

Update: 2016-03-24 18:05 GMT

 ಬೆಂಗಳೂರು, ಮಾ.24: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ವಿಶ್ವಕಪ್‌ನ ಸೂಪರ್-10 ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶವನ್ನು 1 ರನ್‌ಗಳ ಅಂತರದಿಂದ ಮಣಿಸಿತ್ತು. ಈ ಮೂಲಕ ಸೆಮಿ ಫೈನಲ್‌ಗೆ ತಲುಪುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿತ್ತು. ಭಾರತ-ಬಾಂಗ್ಲಾದೇಶ ನಡುವಿನ ರೋಚಕ ಪಂದ್ಯದ ಅಂಕಿ-ಅಂಶ ಈ ಕೆಳಗಿನಂತಿದೆ...

9: ಟ್ವೆಂಟಿ-20 ಕ್ರಿಕೆಟ್‌ನಲ್ಲಿ ತಂಡವೊಂದು ಒಂದು ರನ್‌ನಿಂದ ಪಂದ್ಯವನ್ನು ಗೆದ್ದುಕೊಂಡಿರುವುದು ಇದು 9ನೆ ದೃಷ್ಟಾಂತ. ಭಾರತ ಎರಡನೆ ಬಾರಿ ಈ ಸಾಧನೆ ಮಾಡಿದೆ. ಕೊಲಂಬೊದಲ್ಲಿ ನಡೆದ 2012ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕವನ್ನು 1 ರನ್‌ನಿಂದ ಸೋಲಿಸಿತ್ತು. ಟ್ವೆಂಟಿ-20 ವಿಶ್ವಕಪ್‌ನಲ್ಲಿ ನಾಲ್ಕನೆ ಬಾರಿ ತಂಡವೊಂದು 1 ರನ್‌ನಿಂದ ಗೆಲುವು ಸಾಧಿಸಿದೆ. ಈ ಪೈಕಿ ಭಾರತ ಎರಡು ಬಾರಿ 1 ರನ್‌ನಿಂದ ಪಂದ್ಯ ಜಯಿಸಿದೆ.

5-0: ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಆಡಿರುವ ಐದೂ ಪಂದ್ಯಗಳನ್ನು ಜಯಿಸಿ 5-0 ದಾಖಲೆ ಹೊಂದಿದೆ. ಮೂರು ಬಾರಿ ಮೊದಲು ಬ್ಯಾಟಿಂಗ್ ಮಾಡುವ ಮೂಲಕ, ಮತ್ತೆರಡು ಬಾರಿ ರನ್ ಬೆನ್ನಟ್ಟುವ ಮೂಲಕ ಗೆಲುವು ಸಾಧಿಸಿತ್ತು.

5-31: ಬಾಂಗ್ಲಾದೇಶ ಅಗ್ರ 8 ತಂಡಗಳ ವಿರುದ್ಧ 5-31 ಗೆಲುವು-ಸೋಲು ದಾಖಲೆ ಹೊಂದಿದೆ. ಬಾಂಗ್ಲಾ ತಂಡ ಪಾಕಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ತಂಡವನ್ನು 2 ಬಾರಿ ಹಾಗೂ ಶ್ರೀಲಂಕಾವನ್ನು ಒಂದು ಬಾರಿ ಮಣಿಸಿತ್ತು.

4: ಬಾಂಗ್ಲಾದ ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ 5 ಪಂದ್ಯಗಳಲ್ಲಿ ನಾಲ್ಕನೆ ಬಾರಿ ರೋಹಿತ್ ಶರ್ಮರನ್ನು ಔಟ್ ಮಾಡಿದ್ದಾರೆ. 3 ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಹಾಗೂ ಒಂದು ಬಾರಿ ಟ್ವೆಂಟಿ-20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

12: ಶಿಖರ್ ಧವನ್ 21 ಟ್ವೆಂಟಿ-20 ಇನಿಂಗ್ಸ್‌ಗಳ ಪೈಕಿ 12ನೆ ಬಾರಿ 25 ರನ್ ಒಳಗೆ ಔಟಾಗಿದ್ದಾರೆ. ಧವನ್ ಟ್ವೆಂಟಿ-20 ಸರಾಸರಿ 21.21, ಸ್ಟ್ರೈಕ್‌ರೇಟ್ 113.52.

17: ಕಳೆದ 9 ಟ್ವೆಂಟಿ-20 ಇನಿಂಗ್ಸ್‌ಗಳಲ್ಲಿ ಭಾರತ ಮೊದಲ ವಿಕೆಟ್‌ನಲ್ಲಿ 17ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದೆ. 43 ರನ್ ಗರಿಷ್ಠ ಜೊತೆಯಾಟವಾಗಿದೆ. ಆರು ಬಾರಿ 15 ರನ್ ಗಳಿಸುವಷ್ಟರಲ್ಲಿ ಭಾರತದ ಮೊದಲ ವಿಕೆಟ್ ಪತನವಾಗಿದೆ.

5: ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತದ ಐವರು ದಾಂಡಿಗರು ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ನಾಯಕ ಎಂಎಸ್ ಧೋನಿ ಇದೀಗ ಹೊಸ ಸೇರ್ಪಡೆಯಾಗಿದ್ದಾರೆ. ಧೋನಿ ಅವರಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್ ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಧೋನಿ 58 ಇನಿಂಗ್ಸ್‌ಗಳಲ್ಲಿ 29 ಬಾರಿ ಔಟಾಗದೆ ಉಳಿದಿದ್ದಾರೆ.34.75ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

1: ಟ್ವೆಂಟಿ-20 ಕ್ರಿಕೆಟ್‌ನಲ್ಲಿ ರನ್ ಚೇಸಿಂಗ್‌ನ ವೇಳೆ ಅಂತಿಮ ಓವರ್‌ನಲ್ಲಿ ಕೊನೆಯ 3 ಎಸೆತಗಳಲ್ಲಿ 3 ವಿಕೆಟ್‌ಗಳು ಪತನಗೊಂಡಿದ್ದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News