ಪಾಕ್ ತಂಡದಲ್ಲಿ ಗುಂಪುಗಾರಿಕೆ ಇಲ್ಲ: ಶುಐಬ್ ಮಲಿಕ್

Update: 2016-03-24 18:07 GMT

 ಮೊಹಾಲಿ, ಮಾ.24: ಪ್ರಸ್ತುತ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ತಂಡದೊಳಗೆ ಆಟಗಾರರ ಗುಂಪುಗಾರಿಕೆ ಕಾರಣ ಎಂಬ ವರದಿಯನ್ನು ತಳ್ಳಿ ಹಾಕಿರುವ ಹಿರಿಯ ಆಲ್‌ರೌಂಡರ್ ಶುಐಬ್ ಮಲಿಕ್, 2009ರ ವಿಶ್ವಕಪ್‌ನಲ್ಲಿ ತಂಡದ ಆಟಗಾರರಲ್ಲಿ ಒಗ್ಗಟ್ಟಿಲ್ಲದಿದ್ದರೂ ವಿಶ್ವಕಪ್‌ನ್ನು ಜಯಿಸಿತ್ತು ಎಂದು ಹೇಳಿದ್ದಾರೆ.

‘‘ಪಾಕ್ ತಂಡ ಉತ್ತಮ ಪ್ರದರ್ಶನ ನೀಡದೇ ಇದ್ದಾಗ ಇಂತಹ ನಕಾರಾತ್ಮಕ ವಿಷಯಗಳು ಹರಡುತ್ತವೆ. ನಾವು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದೇವೆ. ತಂಡ ಸೋತಾಗ ಕೆಲವು ಜನರು ಒತ್ತಡ ಹಾಕುತ್ತಾರೆ.ತಂಡದಲ್ಲಿ ಬದಲಾವಣೆ ಆಗುತ್ತದೆ. ನನ್ನ ಪ್ರಕಾರ ತಂಡದಲ್ಲಿ ಗುಂಪುಗಾರಿಕೆ ಇದೆ ಎಂಬ ವಿಷಯದಲ್ಲಿ ಹುರುಳಿಲ್ಲ. 2009ರ ವಿಶ್ವಕಪ್‌ನಲ್ಲಿ ತಂಡದ ಆರು ಮಂದಿ ಆಟಗಾರರು ಪರಸ್ಪರ ಮುಖ ನೋಡಿ ಮಾತನಾಡುತ್ತಿರಲಿಲ್ಲ. ಆದಾಗ್ಯೂ ನಾವು ಆ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದೆವು’’ ಎಂದು ಮಲಿಕ್ ಹಳೆಯ ಘಟನೆಯನ್ನು ನೆನಪಿಸಿದರು.

 3 ಪಂದ್ಯಗಳ ಪೈಕಿ 2ರಲ್ಲಿ ಸೋತಿರುವ ಪಾಕಿಸ್ತಾನದ ಸೆಮಿ ಫೈನಲ್ ಆಸೆ ಬಹುತೇಕ ಅಂತ್ಯಗೊಂಡಿದೆ. ಈ ನಡುವೆ ಪಾಕ್‌ನ ಸಚಿವರೊಬ್ಬರು ತಂಡದಲ್ಲಿ ಗುಂಪುಗಾರಿಕೆ ಹಾಗೂ ರಾಜಕೀಯ ತಲೆ ಎತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

 ‘‘ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಆದರೆ, ಸ್ಥಿರತೆಯ ಕೊರತೆ ಸಮಸ್ಯೆಯಾಗಿದೆ. ತಂಡವು ಮೈದಾನದ ಒಳಗೆ ಹಾಗೂ ಹೊರಗೆ ಸಮಸ್ಯೆ ಎದುರಿಸುತ್ತಿದ್ದರೂ ಆಸ್ಟ್ರೆಲಿಯದ ವಿರುದ್ಧ ಗೆಲುವು ಸಾಧಿಸುವತ್ತ ತಂಡ ಗಮನ ನೀಡಲಿದೆ’’ ಎಂದು ಮಲಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News