ವಿಶ್ವಕಪ್: ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 171/4

Update: 2016-03-26 15:53 GMT

ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ

ಹೊಸದಿಲ್ಲಿ, ಮಾ.26: ವಿಕೆಟ್‌ಕೀಪರ್ ಜೋಸ್ ಬಟ್ಲರ್‌ರ ಆಕರ್ಷಕ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನ ಗ್ರೂಪ್-1ರ ನಿರ್ಣಾಯಕ ಸೂಪರ್-10 ಪಂದ್ಯದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿದೆ.

ಇಲ್ಲಿನ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಇಂಗ್ಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಇಂಗ್ಲೆಂಡ್ 2ನೆ ಓವರ್‌ನಲ್ಲಿ ಅಲೆಕ್ಸ್ ಹೇಲ್ಸ್(4) ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೆ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿದ ಜೇಸನ್ ರಾಯ್(42 ರನ್) ಹಾಗೂ ಜೋ ರೂಟ್(25) ತಂಡವನ್ನು ಆಧರಿಸಿದರು.

39 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳಿರುವ 42 ರನ್ ಗಳಿಸಿದ್ದ ರಾಯ್ ಹಾಗೂ 24 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 24 ರನ್ ಗಳಿಸಿದ್ದ ರೂಟ್ ಸ್ಪಿನ್ನರ್ ವಾಂಡರ್‌ಸೆಗೆ ವಿಕೆಟ್ ಒಪ್ಪಿಸಿದರು.

4ನೆ ವಿಕೆಟ್ ಜೊತೆಯಾಟದಲ್ಲಿ 74 ರನ್ ಸೇರಿಸಿದ ನಾಯಕ ಇಯಾನ್ ಮೋರ್ಗನ್(22) ಹಾಗೂ ವಿಕೆಟ್‌ಕೀಪರ್ ಬಟ್ಲರ್(ಔಟಾಗದೆ 66, 37 ಎಸೆತ, 8 ಬೌಂಡರಿ, 2 ಸಿಕ್ಸರ್) ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.

ಗ್ರೂಪ್-1ರಲ್ಲಿ 2ನೆ ಸ್ಥಾನದಲ್ಲಿರುವ ಇಂಗ್ಲೆಂಡ್ ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಸೆಮಿಫೈನಲ್ ಸ್ಥಾನ ಖಚಿತಪಡಿಸಲಿದೆ. ಗ್ರೂಪ್-1ರಲ್ಲಿ ವೆಸ್ಟ್‌ಇಂಡೀಸ್ ಈಗಾಗಲೇ ಸೆಮಿಫೈನಲ್ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News