ವಿಂಡೀಸ್ ವಿರುದ್ಧ ಭಾರತಕ್ಕೆ ಸೋಲು, ಟೂರ್ನಿಯಿಂದ ಹೊರಕ್ಕೆ

Update: 2016-03-27 18:25 GMT

ಮಹಿಳೆಯರ ಟ್ವೆಂಟಿ-20 ವಿಶ್ವಕಪ್

ಮೊಹಾಲಿ, ಮಾ.27: ನಾಗ್ಪುರದಲ್ಲಿ ನಡೆದ ಪುರುಷರ ವಿಶ್ವಕಪ್ ಟ್ವೆಂಟಿ-20 ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್ ತಂಡ ಅಫ್ಘಾನಿಸ್ತಾನದ ವಿರುದ್ಧ ಆಘಾತಕಾರಿ ಸೋಲನುಭವಿಸಿದರೆ, ಇಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ವಿಂಡೀಸ್‌ನ ಮಹಿಳಾ ಆಟಗಾರ್ತಿಯರು 3 ರನ್‌ನಿಂದ ರೋಚಕ ಗೆಲುವು ದಾಖಲಿಸಿದ್ದಾರೆ.

ವಿಂಡೀಸ್‌ಗೆ ಶರಣಾಗಿರುವ ಭಾರತ ಟೂರ್ನಿಯಿಂದ ಹೊರ ನಡೆದಿದೆ. ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 114 ರನ್ ಗಳಿಸಿತ್ತು.

ಹರ್ಮನ್‌ಪ್ರೀತ್ ಕೌರ್(4-23) ಹಾಗೂ ಅನುಜಾ ಪಾಟೀಲ್(3-16) ವಿಂಡೀಸ್‌ಗೆ ಕಡಿವಾಣ ಹಾಕಿದರು. ವಿಂಡೀಸ್‌ನ ಪರ ಆರಂಭಿಕ ಆಟಗಾರ್ತಿ ಸ್ಟಫಾನಿ ಟೇಲರ್(47) ಅಗ್ರ ಸ್ಕೋರರ್ ಎನಿಸಿಕೊಂಡರು. ಡಾಟಿನ್ 45 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ 16 ರನ್‌ಗೆ 3 ವಿಕೆಟ್ ಪಡೆದ ಡಾಟಿನ್ ಆಲ್‌ರೌಂಡ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಗೌರವ ಪಡೆದರು.

 ಗೆಲ್ಲಲು ಸುಲಭ ಸವಾಲು ಪಡೆದಿದ್ದ ಭಾರತದ ಮಹಿಳಾ ತಂಡ ಡಾಟಿನ್(3-16) ಹಾಗೂ ಸಮಂತಾ ಫ್ಲೆಚರ್(2-15) ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 111 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಸೆಮಿಫೈನಲ್‌ಗೆ ತಲುಪಲು ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಬೌಲಿಂಗ್‌ನಲ್ಲಿ ಮಿಂಚಿದ್ದ ಮಿಥಾಲಿ ರಾಜ್ ಬಳಗ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿತು.

ಭಾರತದ ಪರ ಅನುಜಾ ಪಾಟೀಲ್(26), ಜುಲನ್ ಗೋಸ್ವಾಮಿ(25) ಹಾಗೂ ಸ್ಮತಿ ಮಂಧಾನ(22) ಎರಡಂಕೆಯ ಸ್ಕೋರ್ ದಾಖಲಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 114/8

(ಸ್ಟಫಾನಿ ಟೇಲರ್ 47, ಡಾಟಿನ್ 45, ಹರ್ಮನ್‌ಪ್ರೀತ್ ಕೌರ್ 4-23, ಅನುಜಾ ಪಾಟೀಲ್ 3-16)

ಭಾರತ: 20 ಓವರ್‌ಗಳಲ್ಲಿ 111/9

 (ಅನುಜಾ ಪಾಟೀಲ್ 26, ಜುಲನ್ ಗೋಸ್ವಾಮಿ 25, ಮಂದಾನ 22, ಡಾಟಿನ್ 3-16, ಫ್ಲೆಚರ್ 2-15)

ಪಂದ್ಯಶ್ರೇಷ್ಠ: ಡಾಟಿನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News