ಭಾರತಕ್ಕೆ ಇಂದು ತುರ್ಕ್‌ಮೆನಿಸ್ತಾನ ಸವಾಲು
2018ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ
ಕೊಚ್ಚಿ, ಮಾ.28: ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತದ ಫುಟ್ಬಾಲ್ ತಂಡ ಮಂಗಳವಾರ ಇಲ್ಲಿನ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆಯಲಿರುವ 2018ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ತುರ್ಕ್‌ಮೆನಿಸ್ತಾನವನ್ನು ಎದುರಿಸಲಿದೆ.
ಭಾರತ ಇತ್ತೀಚೆಗಷ್ಟೇ ಟೆಹ್ರಾನ್‌ನಲ್ಲಿ ನಡೆದಿದ್ದ ಇರಾನ್ ವಿರುದ್ಧದ ಪಂದ್ಯವನ್ನು 0-4 ಅಂತರದಿಂದ ಹೀನಾಯವಾಗಿ ಸೋತಿತ್ತು. ಇದೀಗ 160ನೆ ರ್ಯಾಂಕಿನಲ್ಲಿರುವ ಭಾರತ 113ನೆ ರ್ಯಾಂಕಿನಲ್ಲಿರುವ ತುರ್ಕ್‌ಮೆನಿಸ್ತಾನವನ್ನು ಎದುರಿಸಲಿದೆ.
ಭಾರತ ಏಳು ಗ್ರೂಪ್ ಪಂದ್ಯಗಳ ಪೈಕಿ ಆರರಲ್ಲಿ ಸೋತಿದೆ. ಕೇವಲ 3 ಅಂಕವನ್ನು ಗಳಿಸಿರುವ ಭಾರತ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದೆ. ಒಟ್ಟು 10 ಅಂಕ ಗಳಿಸಿರುವ ತುರ್ಕ್‌ಮೆನಿಸ್ತಾನ ತಂಡ ಮೂರನೆ ಸ್ಥಾನದಲ್ಲಿದೆ.
‘‘ನಾವು ಸುನೀಲ್ ಚೆಟ್ರಿ ಅವರನ್ನು ಕಣಕ್ಕಿಸಬೇಕೇ, ಬೇಡವೇ ಎನ್ನುವ ಬಗ್ಗೆ ಕೊನೆಯ ಕ್ಷಣದಲ್ಲಿ ನಿರ್ಧರಿಸಲಿದ್ದೇವೆ. ಚೆಟ್ರಿ ಭಾರತದ ಉತ್ತಮ ನಾಯಕ. ಮಂಗಳವಾರದ ಪಂದ್ಯದಲ್ಲಿ ಅವರು ಆಡದೇ ಇದ್ದರೆ ಅವರ ಸೇವೆಯಿಂದ ನಾವು ವಂಚಿತರಾಗಲಿದ್ದೇವೆ’’ ಎಂದು ಭಾರತದ ಕೋಚ್ ಸ್ಟೀಫನ್ ಕಾನ್‌ಸ್ಟನ್‌ಟೈನ್ ಹೇಳಿದ್ದಾರೆ.
ಸ್ಟೀಫನ್ ಇತ್ತೀಚೆಗಿನ ದಿನಗಳಲ್ಲಿ ಭಾರತದ ಹಲವಾರು ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಇರಾನ್ ವಿರುದ್ದದ ಪಂದ್ಯದಲ್ಲಿ 19ರ ಹರೆಯದ ಉದಾಂತ್ ಸಿಂಗ್ ಚೊಚ್ಚಲ ಪಂದ್ಯ ಆಡಿದ್ದರು. ಚೆಟ್ರಿ ಅನುಪಸ್ಥಿತಿಯಲ್ಲಿ ಇರಾನ್ ವಿರುದ್ಧದ ಪಂದ್ಯದಲ್ಲಿ ಸ್ಟ್ರೈಕರ್ ಜೆಜೆ ಲಾಲ್‌ಪೆಕುಲ್ವಾ ತಂಡದ ನಾಯಕನಾಗಿದ್ದರು.