ಆಸ್ಟ್ರೇಲಿಯ ವಿರುದ್ಧ ಗೆಲುವು ವರ್ಣಿಸಲು ಸಾಧ್ಯವಿಲ್ಲ: ಕೊಹ್ಲಿ
ಮೊಹಾಲಿ, ಮಾ.28: ಆಸ್ಟ್ರೇಲಿಯ ವಿರುದ್ಧ ರವಿವಾರ ಮೊಹಾಲಿಯಲ್ಲಿ ಬಾರಿಸಿರುವ 82 ರನ್ ತನ್ನ ಜೀವನದ ಶ್ರೇಷ್ಠ ಇನಿಂಗ್ಸ್ ಎಂದು ಬಣ್ಣಿಸಿರುವ ವಿರಾಟ್ ಕೊಹ್ಲಿ, ಆಸೀಸ್ ವಿರುದ್ಧ ಪಂದ್ಯದ ಗೆಲುವನ್ನು ಬಣ್ಣಿಸಲು ಶಬ್ದಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಈ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯವೆಂದೇ ಪರಿಗಣಿಸಲ್ಪಟ್ಟಿದ್ದ ವಿಶ್ವಶ್ರೇಷ್ಠ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ದೊಡ್ಡ ಸಾಧನೆ. ವಿಶ್ವಕಪ್‌ನಲ್ಲಿ ನಾವು ತವರಿನಲ್ಲಿ ಆಡುತ್ತಿದ್ದೇವೆ. ಅಭಿಮಾನಿಗಳು ನಮ್ಮಿಂದ ಬಹಳಷ್ಟು ನಿರೀಕ್ಷಿಸುತ್ತಿದ್ದಾರೆ. ಅಭಿಮಾನಿಗಳಿಗೆ ಸಾಧ್ಯವಾದಷ್ಟು ಮನರಂಜನೆ ನೀಡಲು ನಾವು ಬಯಸಿದ್ದೇವೆ’’ ಎಂದು ಕೊಹ್ಲಿ ಹೇಳಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 5 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿದಾಗ ಎರಡು ಕೈ ಮೇಲೆತ್ತಿದ ಕೊಹ್ಲಿ ಮೈದಾನದಲ್ಲಿ ಮಂಡಿವೂರಿ ಕುಳಿತು ಸಮಾಧಾನದ ನಿಟ್ಟುಸಿರು ಬಿಟ್ಟರು.
‘‘ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಇದು ನಾವು ಆಡಬೇಕಾದ ಕ್ರಿಕೆಟ್. ಪ್ರತಿ ಪಂದ್ಯದಲ್ಲೂ ನಮಗೆ ಇಂತಹ ಸವಾಲಿನ ಅಗತ್ಯವಿದೆ. ಆದರೆ, ನೀವು ಇಂತಹ ಪರಿಸ್ಥಿತಿಯನ್ನು ಹೆಚ್ಚು ನಿರೀಕ್ಷಿಸಬೇಡಿ. ನನ್ನೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಎಂಎಸ್(ಧೋನಿ) ನನ್ನನ್ನು ಶಾಂತಚಿತ್ತದಿಂದ ಇರುವಂತೆ ಮಾಡಿದರು. ನನ್ನ ಪ್ರಕಾರ ಇದೊಂದು ಸಾಂಘಿಕ ಬ್ಯಾಟಿಂಗ್ ಪ್ರಯತ್ನ. ನಾವು ಕ್ವಾರ್ಟರ್‌ಫೈನಲ್ ಗೆರೆ ದಾಟಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ’’ಎಂದು ಕೊಹ್ಲಿ ಅಭಿಪ್ರಾಯಪಟ್ಟರು.