ಈಜಿಪ್ಟ್ ವಿಮಾನ ಅಪಹರಣ; ಸುಖಾಂತ್ಯ, 6 ಗಂಟೆಗಳ ಸಂಧಾನದ ಬಳಿಕ ಅಪಹರಣಕಾರನ ಬಂಧನ

Update: 2016-03-29 14:43 GMT

ಕ್ಷಣಕ್ಕೊಂದು ಹೇಳಿಕೆ ನೀಡಿದ ಅಪಹರಣಕಾರ: ಮೊದಲು ಪರಿತ್ಯಕ್ತ ಹೆಂಡತಿಯನ್ನು ನೋಡಬೇಕೆಂದ, ಬಳಿಕ ಈಜಿಪ್ಟ್‌ನ ರಾಜಕೀಯ ಕೈದಿಗಳನ್ನು ಬಿಡಗಡೆ ಮಾಡಬೇಕೆಂದ.

ಲರ್ನಕ (ಸೈಪ್ರಸ್), ಮಾ. 29: ಸ್ಫೋಟಕಗಳನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾನೆಂದು ಭಾವಿಸಲಾದ ವ್ಯಕ್ತಿಯೊಬ್ಬ ಮಂಗಳವಾರ ಈಜಿಪ್ಟ್‌ನ ವಿಮಾನವೊಂದನ್ನು ಅಪಹರಿಸಿ ದ್ವೀಪ ರಾಷ್ಟ್ರ ಸೈಪ್ರಸ್‌ನಲ್ಲಿ ಬಲವಂತವಾಗಿ ಇಳಿಸಿದ ಘಟನೆ ನಡೆದಿದೆ.

ಆದಾಗ್ಯೂ, ಸುಮಾರು ಆರು ಗಂಟೆಗಳ ಬಿಕ್ಕಟ್ಟಿನ ಬಳಿಕ ಅಪಹರಣಕಾರನನ್ನು ಸೈಪ್ರಸ್ ಭದ್ರತಾ ಸಿಬ್ಬಂದಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈಜಿಪ್ಟ್‌ಏರ್ ಕಂಪೆನಿಗೆ ಸೇರಿದ ವಿಮಾನವು ಕೈರೋ ಮತ್ತು ಅಲೆಕ್ಸಾಂಡ್ರಿಯ ನಡುವೆ ಹಾರುತ್ತಿದ್ದಾಗ ಈ ವ್ಯಕ್ತಿಯು ಸಿಬ್ಬಂದಿಯನ್ನು ಬೆದರಿಸಿ ವಿಮಾನವನ್ನು ತನ್ನ ವಶಕ್ಕೆ ತೆಗೆದುಕೊಂಡನು ಎನ್ನಲಾಗಿದೆ.

ಆದಾಗ್ಯೂ, ವಿಮಾನದಲ್ಲಿದ್ದ 55ಕ್ಕೂ ಅಧಿಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಅನಾಹುತವಾಗಿರುವ ಅಥವಾ ಅವರು ಗಾಯಗೊಂಡಿರುವ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ.

ಅದೇ ವೇಳೆ, ಕ್ಷಣ ಕ್ಷಣಕ್ಕೆ ಬದಲಾಗುತ್ತಿರುವ ವಿದ್ಯಮಾನಗಳನ್ನು ಕಂಡ ಈ ಪ್ರಕರಣದ ಪೂರ್ಣ ವಿವರಗಳು ಲಭಿಸಿಲ್ಲ.

ಸೈಪ್ರಸ್‌ನ ವಿದೇಶ ಸಚಿವರು ಟ್ವೀಟ್ ಮಾಡಿ, ಅಪಹರಣಕಾರನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.

ಕೈರೋದಲ್ಲಿ, ಈಜಿಪ್ಟ್‌ಏರ್ ಕಂಪೆನಿಯ ಅಧಿಕಾರಿಗಳೂ, ಅಪಹರಣ ಅಂತ್ಯಗೊಂಡಿದೆ ಎಂದು ಘೋಷಿಸಿದ್ದಾರೆ.

ಇದಕ್ಕೂ ಮೊದಲು, ಅಪಹರಣ ಭಯೋತ್ಪಾದನಾ ಘಟನೆಯಲ್ಲ ಎಂದು ಸೈಪ್ರಸ್ ಅಧ್ಯಕ್ಷ ನಿಕೊಸ್ ಅನಾಸ್ತೇಶಿಯಡಿಸ್ ಹೇಳಿದರು.

ಅಪಹರಣಕ್ಕೊಳಗಾದ ವಿಮಾನವನ್ನು ಲರ್ನಾಕ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿಡಲಾಗಿದೆ.

‘‘ಅಪಹರಣಕಾರನೊಂದಿಗೆ ಮಾಡಿದ ಸಂಧಾನದ ಫಲವಾಗಿ, ಸಿಬ್ಬಂದಿ ಮತ್ತು ಐವರು ವಿದೇಶೀಯರನ್ನು ಹೊರತುಪಡಿಸಿ ಎಲ್ಲ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ’’ ಎಂದು ಏರ್‌ಲೈನ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಬಳಿಕ ಅದು ಹೇಳಿಕೆಯನ್ನು ಕೊಂಚ ಬದಲಿಸಿ, ಅಪಹಾರಕನ ವಶದಲ್ಲಿರುವ ವಿದೇಶಿ ಪ್ರಯಾಣಿಕರ ಸಂಖ್ಯೆ ನಾಲ್ಕು ಎಂದು ಹೇಳಿತು.

ಸ್ಫೋಟಕಗಳನ್ನು ಧರಿಸಿದ ಪ್ರಯಾಣಿಕನೊಬ್ಬ ತನಗೆ ಬೆದರಿಕೆ ಹಾಕಿದ್ದು, ವಿಮಾನವನ್ನು ಲರ್ನಕದಲ್ಲಿ ಇಳಿಸುವಂತೆ ಬಲವಂತಪಡಿಸುತ್ತಿದ್ದಾನೆ ಎಂದು ವಿಮಾನದ ಪೈಲಟ್ ಉಮರ್ ಅಲ್-ಗಮಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಈಜಿಪ್ಟ್‌ನ ನಾಗರಿಕ ವಾಯುಯಾನ ಸಚಿವಾಲಯದ ತಿಳಿಸಿದೆ.

ವಿಮಾನವು ಈಜಿಪ್ಟ್‌ನ ಉತ್ತರದ ಬಂದರು ನಗರ ಅಲೆಕಾಂಡ್ರಿಯದಿಂದ ರಾಜಧಾನಿ ಕೈರೋಗೆ ಹಾರುತ್ತಿತ್ತು. ಆದರೆ, ಬಳಿಕ ವಿಮಾನವು ಸೈಪ್ರಸ್‌ನ ಲರ್ನಕದತ್ತ ತಿರುಗಿತು

ಮಾಜಿ ಹೆಂಡತಿಯನ್ನು ನೋಡಬೇಕೆಂದ

ಅಪಹರಣಕಾರನನ್ನು ಈಜಿಪ್ಟ್ ಮಾಧ್ಯಮಗಳು ಇಬ್ರಾಹೀಂ ಸಮಹ ಎಂಬುದಾಗಿ ಹೆಸರಿಸಿವೆ.

ಸೈಪ್ರಸ್ ಪ್ರಜೆಯಾಗಿರುವ ತನ್ನ ಮಾಜಿ ಹೆಂಡತಿಯನ್ನು ನೋಡಬೇಕೆಂಬ ಬೇಡಿಕೆಯನ್ನು ಆತ ಒಂದು ಹಂತದಲ್ಲಿ ಮುಂದಿಟ್ಟಿದ್ದನು ಎಂದು ವರದಿಗಳು ಹೇಳಿವೆ.

ಕೈದಿಗಳ ಬಿಡುಗಡೆಗೆ ಒತ್ತಾಯ

ಸಂಧಾನದ ವೇಳೆ, ಈಜಿಪ್ಟ್‌ನಲ್ಲಿರುವ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಅಪಹರಣಕಾರ ಹೇಳಿದನು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News